ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಮಂಗಳವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.ಇದೀಗ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನಿಧನಕ್ಕೆ ಸಂಸದ ತೇಜಸ್ವಿ ಸೂರ್ಯ ಸಂತಾಪ ಸೂಚಿಸಿದ್ದು, ಅವರ ಹೆಸರಿನಲ್ಲಿ ಪ್ರಶಸ್ತಿಯನ್ನ ಕೊಡಬೇಕು ಎಂದು ಸಿಎಂ ಅವರಿಗೆ ಮನವಿ ಮಾಡ್ತೀನಿ ಅಂದಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಎಸ್ ಎಂ ಕೃಷ್ಣ ಇವತ್ತು ನಮ್ಮನ್ನ ಅಗಲಿದ್ದಾರೆ. ಅವರು ಕಾಂಗ್ರೆಸ್‌ನಲ್ಲೇ ಬಹು ವರ್ಷದಿಂದ ಇದ್ದವರು. ಆದರೂ ಹಲವು ರಾಜಕಾರಣಿಗಳಿಗೆ ತುಂಬಾ ಪ್ರೇರಣೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಚಿಕ್ಕವಯಸ್ಸಿನಿಂದಲೂ ಎಸ್ ಎಂ ಕೃಷ್ಣ ಮಾರ್ಗದರ್ಶಕರಾಗಿದ್ದರಂತೆ. ಅವರ ಗಾಂಭೀರ್ಯತೆ, ಪ್ರಬುದ್ಧವಾದ ಮಾತು ಎಲ್ಲವೂ ತೇಜಸ್ವಿ ಅವರಿಗೆ ಪ್ರೇರಣೆಯಾಗಿತ್ತು ಎಂದು ಹೇಳಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಅದೆಷ್ಟೋ ರಾಜಕಾರಣಿಗಳನ್ನ ನೋಡಿದ್ದೀವಿ, ಬೇರೆ ಬೇರೆ ರಾಜಕಾರಣಿಗಳು ಟೀಕೆ ಮಾಡಿದ್ದನ್ನು ನೋಡಿದ್ದೀವಿ. ಆದ್ರೆ ಎಸ್ ಎಂ ಕೆ ಯಾರನ್ನ ಕೂಡ ಅಗೌರವದಿಂದ ನೋಡಿಲ್ಲ. ಅವರ ನಡುವಳಿಕೆ ಅವರ ಬೆಳವಣಿಗೆ ಹಾಗಿತ್ತು. ಅವರು ಹಾಕುತ್ತಿದ್ದ ಬಟ್ಟೆ ತುಂಬಾ ಸ್ಟೈಲಿಶ್ ಆಗಿತ್ತು. ಅದಕ್ಕೂ ಕೂಡ ಅವರಿಂದ ನಾನು ಸ್ಫೂರ್ತಿಯಾಗಿದ್ದೆಎಂದು ಹೇಳಿದ್ದಾರೆ.
ಇನ್ನು ಸಂಸದ ತೇಜಸ್ವಿ ಸೂರ್ಯ, ಎಸ್ ಎಂ ಕೃಷ್ಣ ಅವರ ಹೆಸರು ಗೂಗಲ್‌ನಲ್ಲಿ ಹಾಕಿ, ಅವರು ಯಾವ ಶರ್ಟ್ ಹಾಕ್ತಾರೆ, ಯಾವ ಪ್ಯಾಂಟ್ ಹಾಕ್ತಾರೆ ಅಂತ ಸರ್ಚ್ ಮಾಡುತ್ತಿದ್ದರಂತೆ. ಅಲ್ಲದೇ, ಕಾವೇರಿ ವಿವಾದ, ರಾಜಕುಮಾರ್ ಅಪಹರಣ ಎಲ್ಲವೂ ವಿಶೇಷವಾಗಿ ನಿಭಾಯಿಸಿದವರು ಎಸ್ ಎಂ ಕೃಷ್ಣ.
ಅವರಿಗೆ ವಿದಾಯ ಹೇಳುತ್ತಿರುವ ಈ ಸಂದರ್ಭದಲ್ಲಿ ಅವರ ಅಭಿವೃದ್ಧಿ ಪರ, ಮೌಲ್ಯಯುತ ರಾಜಕಾರಣ, ಸಾರ್ವಜನಿಕ ಆಡಳಿತವನ್ನು ಚಿರಸ್ಥಾಯಿಯಾಗಿಸುವ, ಅವರ ನೆನಪಿನಲ್ಲಿ ಮತ್ತು ಅವರ ಮೌಲ್ಯಗಳನ್ನು ಮುಂದುವರೆಸಿ ಕೊಂಡು ಹೋಗುವ ನಿಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿಗೆ ಕೊಡುಗೆ ನೀಡುವವರಿಗೆ ಎಸ್ ಎಂ ಕೃಷ್ಣ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿಯೊಂದನ್ನು ಸ್ಥಾಪನೆ ಮಾಡಿ, ಅವರ ನೆನಪನ್ನು ಚಿರಸ್ಥಾಯಿಯಾಗಿಸುವಂತೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರಲ್ಲಿ ನಾನು ವಿನಂತಿಸುತ್ತೇನೆ ಎಂದರು.