ಹೊಸದಿಗಂತ ಡಿಜಿಟಲ್ ಡೆಸ್ಕ್:
30ನೇ ಆಳ್ವಾಸ್ ವಿರಾಸತ್ 5 ದಿನಗಳ ಸಾಂಸ್ಕೃತಿಕ ಉತ್ಸವ ಹಾಗೂ 6 ದಿನವೂ ನಡೆದ ಮಹಾಮೇಳ ಲಕ್ಷಾಂತರ ಜನರ ಪಾಲ್ಗೊಳ್ಳುವಿಕೆಯ ಮೂಲಕ ಆಯೋಜಕರು ಹಾಗೂ ಸಾರ್ವಜನಿಕರಲ್ಲಿ ಸರ್ವ ಶ್ರೇಷ್ಠ ವಿರಾಸತ್ ಎಂಬ ಭಾವ ಮೂಡಿಸಿ ಸಮಾಪನವಾಯಿತು.
ವಿರಾಸತ್‌ನ ಮುಖ್ಯ ರೂವಾರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಹರ್ಷ ವ್ಯಕ್ತಪಡಿಸಿದರು.
ಪ್ರತಿ ವರ್ಷದಂತೆ ಈ ವರ್ಷದ ವಿರಾಸತ್ ಕೂಡ ಸರ್ವ ಶ್ರೇಷ್ಠ ಸಾಂಸ್ಕೃತಿಕ ಉತ್ಸವವಾಗಿ ಮೂಡಿಬಂದಿದ್ದು, ದೇವರ ಹಾಗೂ ಪ್ರಕೃತಿಯ ಸಂಪೂರ್ಣ ಅನುಗ್ರಹ ಕಾರ್ಯಕ್ರಮ ಯಶಸ್ಸಿಗೆ ಕಾರಣ.
ಈ ಉತ್ಸವ ಎಲ್ಲಾ ವರ್ಗದ ಜನರು – ಮಕ್ಕಳು, ಯುವಕ ಯುವತಿಯರು, ಪ್ರಬುದ್ಧರು, ವಯೋವೃದ್ಧರಾಧಿಯಾಗಿ ಸರ್ವರನ್ನು ಆಕರ್ಷಿಸಿ, ಪಾಲ್ಗೊಳ್ಳುವಂತೆ ಮಾಡಿದೆ.
ಎಲ್ಲರೂ ಮುಕ್ತ ಕಂಠದಿಂದ ಶ್ಲಾಘಿಸಿದ್ದು, ಅದ್ಬುತ ಎಂಬ ಉದ್ಘಾರದ ಭಾವ ಮೂಡಿಸಿರುವುದು ಸಂಘಕರಾದ ನಮಗೆ ಸಂಪೂರ್ಣ ತೃಪ್ತಿ ನೀಡಿದೆ.
ಈ ಕಾರ್ಯಕ್ರಮ ಯಾವುದೇ ಒಂದು ಸಮುದಾಯದ ಕಾರ್ಯಕ್ರಮವಾಗದೇ ಎಲ್ಲಾ ವರ್ಗಗಳ, ಎಲ್ಲಾ ಸಮುದಾಯದ ಜನರನ್ನು ಕಾರ್ಯಕ್ರಮದತ್ತ ಸೆಳೆದದ್ದು, ಇದರ ಇನ್ನೊಂದು ವಿಶೇಷತೆ.
ಆರು ದಿನದ ಕಾರ್ಯಕ್ರಮದಲ್ಲಿ ಪ್ರತಿ ದಿನ ಸುಮಾರು ಒಂದು ಲಕ್ಷದಂತೆ ಜನ ಭಾಗವಹಿಸಿದರೆ, ಶನಿವಾರ ಹಾಗೂ ಭಾನುವಾರ ಜನಸ್ತೋಮ ಲಕ್ಷಕ್ಕೂ ಮೀರಿತ್ತು. ಒಟ್ಟು ಕಾರ್ಯಕ್ರಮ 4000ಕ್ಕೂ ಅಧಿಕ ಕಲಾವಿದರಿಗೆ ವೇದಿಕೆಯಾಗಿ, ಪ್ರತೀ ದಿನ ಸರಾಸರಿ 1500 ದಷ್ಟು ಕಲಾವಿದರು ತಮ್ಮ ಪ್ರತಿಭೆ ವ್ಯಕ್ತ ಪಡಿಸಲು ವೇದಿಕೆಯಾಗಿ ಮೂಡಿ ಬಂತು.
ಪ್ರತಿ ಬಾರಿಯಂತೆ ಈ ಬಾರಿಯ ವಿರಾಸತ್ ಸಾವಿರಾರು ಸಂದೇಶವನ್ನು ಜಗತ್ತಿಗೆ ನೀಡಿದ್ದು, ಪ್ರತಿಯೊಬ್ಬರ ಮುಖದಲ್ಲೂ ಆತ್ಮ ತೃಪ್ತಿಯ ಭಾವ ಮೂಡಿಸಿದೆ. ಕರ್ನಾಟಕ ರಾಜ್ಯಕ್ಕೆ ಶ್ರೇಷ್ಠವೆಂಬoತೆ ನಡೆದ ಕಾರ್ಯಕ್ರಮ ಸಾರ್ವಜನಿಕರಿಗೆ ಸಂಪೂರ್ಣ ಉಚಿತವಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರಲ್ಲೂ ವ್ಹಾವ್ ಎನ್ನುವಂತ ಉದ್ಗಾರ ಮೂಡಿಸಿದೆ.
ಇಲ್ಲಿವರೆಗೆ ನಡೆದ ಎಲ್ಲಾ ವಿರಾಸತ್‌ನಲ್ಲೂ ಪಾಲು ಪಡೆದ ಸಾವಿರಾರು ಜನರು 30ನೇ ಆಳ್ವಾಸ್ ವಿರಾಸತ್‌ನಲ್ಲೂ ಸಂತೋಷದಿoದ ತಮ್ಮ ಮನೆಯ ಕಾರ್ಯಕ್ರಮದಂತೆ ಪಾಲ್ಗೊಂಡರು. ಇಷ್ಟು ದೊಡ್ಡ ಸಂಖ್ಯೆಯ ಜನಸಮೂಹ ಸೇರಿದರು ಯಾರೊಬ್ಬರಿಗೂ ಕಿಂಚಿತ್ತು ತೊಂದರೆಯಾಗದoತೆ ಸಾಂಗವಾಗಿ ನಡೆದದ್ದು ಖುಷಿ ಕೊಟ್ಟಿದೆ.