ಹೊಸ ದಿಗಂತ ಡಿಜಿಟಲ್ ಡೆಸ್ಕ್
“ಇಂಡಿಯಾ ಗೇಟ್ ಬಳಿ ಇರುವ ಅಮರ ಜವಾನ ಜ್ಯೋತಿಯನ್ನು ಅಲ್ಲೇ ಸನಿಹದಲ್ಲಿರುವ ರಾಷ್ಟ್ರೀಯ ಸೈನಿಕ ಸ್ಮಾರಕದ ಜ್ಯೋತಿಯೊಂದಿಗೆ ವಿಲೀನಗೊಳಿಸಲಾಗುವುದು” ಎಂದು ಮಿಲಿಟರಿ ವಕ್ತಾರರ ಕಡೆಯಿಂದ ಘೋಷಿತವಾಗುತ್ತಲೇ ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಸೇರಿದಂತೆ ಹಲವರು ಇದನ್ನೊಂದು ವಿವಾದವಾಗಿ ಪರಿವರ್ತಿಸುವ ಯತ್ನದಲ್ಲಿದ್ದಾರೆ.
“ಈ ಸರ್ಕಾರಕ್ಕೆ ದೇಶಪ್ರೇಮ ಎಂಬುದೇ ಗೊತ್ತಿಲ್ಲ. ಸೈನಿಕರಿಗೆ ಗೌರವ ಸಲ್ಲಿಸುವ ಜ್ಯೋತಿಯನ್ನೇ ಆರಿಸುತ್ತಿದೆ” ಎಂಬ ಟ್ವೀಟ್ ರಾಹುಲ್ ಗಾಂಧಿ ಕಡೆಯಿಂದ ಬಂದಿದೆ.
ಹಾಗಾದರೆ ವಾಸ್ತವವೇನು?
- ಭಾರತಕ್ಕೆ ಬಲಿದಾನ ಮಾಡಿದ ಸೈನಿಕರ ನೆನಪಿನಲ್ಲಿ ಜ್ಯೋತಿ ಉರಿಯುತ್ತಲೇ ಇರುತ್ತದೆ. ಅದನ್ನು ಆರಿಸುವ ಮಾತಿಲ್ಲ. ಆದರೆ ಇಂಡಿಯಾ ಗೇಟಿನಲ್ಲೊಂದು, ರಾಷ್ಟ್ರೀಯ ಸೈನಿಕರ ಸ್ಮಾರಕದಲ್ಲೊಂದು ಎಂದು ಎರಡೆರಡು ಜ್ಯೋತಿಗಳ ಬದಲು ಭಾರತೀಯ ಹುತಾತ್ಮ ಯೋಧರನ್ನೆಲ್ಲ ಅಖಂಡವಾಗಿ ನೆನೆಯುವ ಒಂದು ಜ್ಯೋತಿಯನ್ನು ಇಟ್ಟುಕೊಳ್ಳಲಾಗುತ್ತದೆ.
- ಇಂಡಿಯಾ ಗೇಟ್ ನಿರ್ಮಾಣವಾಗಿದ್ದು ವಿಶ್ವಯುದ್ಧದಲ್ಲಿ ಬ್ರಿಟಿಷ್ ಪಡೆಯಲ್ಲಿದ್ದು ಸೆಣೆಸಿದ ಭಾರತೀಯ ಯೋಧರ ನೆನಪಿಗೆ. ಸ್ವಾತಂತ್ರ್ಯೋತ್ತರ ಭಾರತದ ಸೈನಿಕರ ಬಲಿದಾನಗಳ ಪ್ರಾತಿನಿಧ್ಯ ಅಲ್ಲಿರಲಿಲ್ಲ. ದುರದೃಷ್ಟವಶಾತ್, ಕಾಂಗ್ರೆಸ್ ಸೇರಿದಂತೆ ಈ ಹಿಂದೆ ಆಳಿದ ಪಕ್ಷಗಳಿಗೆ ಸ್ವತಂತ್ರ ಭಾರತಕ್ಕೊಂದು ರಾಷ್ಟ್ರೀಯ ಸೈನಿಕ ಸ್ಮಾರಕ ಬೇಕು ಅಂತನ್ನಿಸದೇ ಹೋಗಿದ್ದರಿಂದ ಅಮರ ಜವಾನ ಜ್ಯೋತಿ ಇಂಡಿಯಾ ಗೇಟಿನಲ್ಲೇ ಮುಂದುವರಿದಿತ್ತು. ಅಲ್ಲಿ ಅಮರ ಜವಾನ ಜ್ಯೋತಿ ಸ್ಥಾಪನೆಯಾಗಿದ್ದು 1972ರಲ್ಲಷ್ಟೆ.
- ಮೋದಿ ಸರ್ಕಾರ ಬಂದ ನಂತರ ರಾಷ್ಟ್ರ ರಾಜಧಾನಿಯಲ್ಲಿ, ಇಂಡಿಯಾ ಗೇಟಿಗೆ ಅನತಿ ದೂರದಲ್ಲೇ ರಾಷ್ಟ್ರೀಯ ಸೈನಿಕ ಸ್ಮಾರಕವನ್ನು ಭವ್ಯವಾಗಿ ಕಟ್ಟಿ ನಿಲ್ಲಿಸಿದೆ. ಸ್ವಾತಂತ್ರ್ಯಾನಂತರದ ಸಂಘರ್ಷಗಳಲ್ಲಿ ಭಾರತಕ್ಕಾಗಿ ಪ್ರಾಣಕೊಟ್ಟ ಪ್ರತಿ ಯೋಧನ ಹೆಸರನ್ನೂ ಇಲ್ಲಿ ಇಟ್ಟಿಗೆಯಲ್ಲಿ ಕೆತ್ತಲಾಗಿದೆ. ಭಾರತ ಸೆಣೆಸಿದ ಯುದ್ಧಗಳ ವಿವರಣೆಯೂ ಇಲ್ಲಿದೆ. ಅಂತೆಯೇ ಯೋಧರ ನೆನಪಲ್ಲಿ ಶಾಶ್ವತ ಜ್ಯೋತಿಯೂ ಇದೆ. ಈಗ ಮಾಡುತ್ತಿರುವುದೇನೆಂದರೆ ಇಂಡಿಯಾ ಗೇಟಿನಲ್ಲಿರುವ ಜ್ಯೋತಿಯನ್ನು ಇದರೊಂದಿಗೆ ವಿಲೀನಗೊಳಿಸುತ್ತಿರುವುದು. ಇದನ್ನು ಜ್ಯೋತಿ ಆರಿಸುವ ಪ್ರಕ್ರಿಯೆ ಎಂದು ರಾಜಕೀಯ ಮಾಡುವುದಕ್ಕೆ ಹಲವರು ಮುಂದಾಗಿದ್ದಾರೆ.