October 18, 2026
Sunday, October 18, 2026
spot_img

ಜಮ್ಮು-ಕಾಶ್ಮೀರದಲ್ಲಿ ಭೀಕರ ಬಸ್ ಅಪಘಾತ: ಪವಾಡದಂತೆ ಪಾರಾದ ಅಮರನಾಥ ಯಾತ್ರಿಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಮ್ಮು ಮತ್ತು ಕಾಶ್ಮೀರದ ಗಂಡೇರ್‌ಬಾಲ್‌ ಜಿಲ್ಲೆಯ ಕಂಗನ್‌ ಪ್ರದೇಶದ ಹರಿಗನ್ವಾನ್‌ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅಮರನಾಥ ಯಾತ್ರೆ ಮುಗಿಸಿ ಬರುತ್ತಿದ್ದ ಭಕ್ತರು ಪವಾಡಸದೃಶ ಪಾರಾಗಿದ್ದಾರೆ.

ಇಡೀ ಬಸ್‌ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ 39 ಯಾತ್ರಿಕರು ಗಾಯಗೊಂಡಿದ್ದಾರೆ. ಗುಹಾ ದೇವಾಲಯದಲ್ಲಿ ಬಾಬಾ ಬರ್ಫಾನಿ ದರುಶನ ಪಡೆದು ಹಿಂತಿರುಗುತ್ತಿದ್ದ ಯಾತ್ರಿಕರಿದ್ದ ಬಸ್, ಹರಿಗನ್ವಾನ್ ಬಳಿಯ ತೀಕ್ಷ್ಣವಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಖಾಲಿ ಮನೆಗೆ ಡಿಕ್ಕಿ ಹೊಡೆದಿದೆ.

ಅದೃಷ್ಟವಶಾತ್ ಬಸ್ ಹತ್ತಿರದಲ್ಲೇ ಹರಿಯುತ್ತಿದ್ದ ಸಿಂಧ್ ನದಿಗೆ ಬೀಳುವುದರಿಂದ ಕೂದಲೆಳೆಯ ಅಂತರದಲ್ಲಿ ತಪ್ಪಿದ್ದು, ಭಾರಿ ಪ್ರಾಣಾಪಾಯ ಹಾಗೂ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಅಪಘಾತದ ಸಮಯದಲ್ಲಿ ಮನೆಯೊಳಗೆ ಯಾರೂ ಇಲ್ಲದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಸದ್ಯ ಪೊಲೀಸರು, ಸ್ಥಳೀಯ ನಿವಾಸಿಗಳು, ಐಟಿಬಿಪಿ, ಸಿಆರ್‌ಪಿಎಫ್‌ ಹಾಗೂ ಭಾರತೀಯ ಸೇನೆ ಜಂಟಿ ಕಾರ್ಯಾಚರಣೆ ನಡೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Must Read