July 30, 2026
Thursday, July 30, 2026
spot_img

ಮಳಲಿಯಲ್ಲಿ ವಿಸ್ಮಯಕಾರಿ ಘಟನೆ: ತೆರೆದ ಬಯಲು, ಬೀಸುವ ಗಾಳಿಯ ನಡುವೆ ಇಪ್ಪತ್ತು ಗಂಟೆ ಉರಿದ ದೀಪ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೈವಸ್ಥಾನದ ಕಟ್ಟೆಯ ಮೇಲೆ ಉರಿಸಿಟ್ಟ ದೀಪವೊಂದು ಸತತ 20 ಗಂಟೆಗಳ ಕಾಲ ಉರಿದು ಭಕ್ತರಲ್ಲಿ ಅಚ್ಚರಿ ಹುಟ್ಟಿಸಿದ ವಿಸ್ಮಯಕಾರಿ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಕೈಕಂಬದ ಮಳಲಿ(ಮಣೇಲ್)ಯ ಉಳಿಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದಿದೆ.

ಮಳಲಿಯ ಸಮೀಪದ ಉಳಿಪಾಡಿಗುತ್ತಿನ ಮತ್ತು ಗ್ರಾಮದ ಕೊರ್ದಬ್ಬು ದೈವಸ್ಥಾನದ ಸುಬ್ಬಿಗುಳಿಗ ಎಂಬ ದೈವದ ಕಟ್ಟೆಯಲ್ಲಿ ಕಳೆದ ಭಾನುವಾರ ಸಂಜೆ ನಾಲ್ಕು ಗಂಟೆಗೆ ಸಣ್ಣದಾದ ದೀಪವೊಂದನ್ನು ಹಚ್ಚಿಡಲಾಗಿತ್ತು. ಇದು ಪುಟ್ಟದಾದ ದೀಪವಾಗಿದ್ದು, ದೀಪಕ್ಕೆ ಪೂರ್ತಿ ಎಣ್ಣೆ ತುಂಬಿದರೆ ಗರಿಷ್ಠ ಎರಡರಿಂದ ಮೂರು ಗಂಟೆ ದೀಪ ಉರಿಯುವಷ್ಟು ಎಣ್ಣೆ ತುಂಬುತ್ತದೆ. ಆದರೆ ಭಾನುವಾರ ಸಂಜೆ ನಾಲ್ಕು ಗಂಟೆಗೆ ಹಚ್ಚಿದ ದೀಪ ಸೋಮವಾರ ಮಧ್ಯಾಹ್ನವರೆಗೆ ಸತತವಾಗಿ 20ಗಂಟೆಗಳ ಕಾಲ ಉರಿದಿದೆ.

ಭಾನುವಾರ ಉರಿಸಿದ ಬಳಿಕ ದೀಪಕ್ಕೆ ಎಣ್ಣೆ ಹಾಕಿಲ್ಲ. ಬತ್ತಿ ಬದಲಿಸಿಲ್ಲ ಆದರೂ ದೀಪ ಉರಿದಿದೆ ಎಂದು ಸ್ಥಳೀಯ ಭಕ್ತರು ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ಕೋಣೆಯ ಒಳಗೆ ಹಚ್ಚಿದ ದೀಪ ಇಷ್ಟು ಧೀರ್ಘ ಸಮಯ ಉರಿಯಲು ಅಸಾಧ್ಯ. ತೆರೆದ ಬಯಲು ಪ್ರದೇಶದಲ್ಲಿರುವ ಕಟ್ಟೆಯ ಮೇಲೆ ಮತ್ತು ಬೀಸುವ ಗಾಳಿಯ ನಡುವೆಯೂ 20 ಗಂಟೆಗಳ ಕಾಲ ದೀಪ ಉರಿಯುತ್ತಲೇ ಇದ್ದುದು ದೈವಗಳ ಕಾರಣಿಕ ಎನ್ನುತ್ತಾರೆ ದೈವ ಭಕ್ತರು.

ತುಳುನಾಡಿನಲ್ಲಿ ಆಗಾಗ ದೈವಗಳು ತಮ್ಮ ಕಾರಣಿಕವನ್ನು ತೊರ್ಪಡಿಸುವ ಮೂಲಕ ತಮ್ಮ ಇರುವಿಕೆಯನ್ನು ಭಕ್ತರಿಗೆ ತಿಳಿಸುವುದು ಸಾಮಾನ್ಯವಾಗಿದ್ದು, ಮಳಲಿಯ ಸುಬ್ಬಿಯಮ್ಮ, ಸುಬ್ಬಿ ಗುಳಿಗ ಕಟ್ಟೆಯ ಮೇಲೆ 20ಗಂಟೆಗಳ ಕಾಲ ದೀಪ ಉರಿಯುವ ಮೂಲಕ ದೈವಗಳು ತಮ್ಮ ಇರುವಿಕೆಯನ್ನು ತೋರಿಸಿವೆ ಎನ್ನುವುದು ಅಭಿಪ್ರಾಯವಾಗಿದೆ.

ಮೊನ್ನೆಯಷ್ಟೇ ಇಲ್ಲಿ ನೇಮೋತ್ಸವ ನಡೆದಿತ್ತು. ಅದಾದ ಬಳಿಕ ಈ ವಿಸ್ಮಯಕಾರಿ ಘಟನೆ ನಡೆದಿದ್ದು, 20 ಗಂಟೆಗಳ ದೀಪ ಉರಿಯಲು ವೈಜ್ಞಾನಿಕ ಕಾರಣ ಏನೇ ಇದ್ದರೂ ಭಕ್ತರಲ್ಲಿ ದೈವಗಳ ಮೇಲಿನ ಭಕ್ತಿ, ನಂಬಿಕೆ ಹೆಚ್ಚುವಂತೆ ಮಾಡಿದೆ ದೀಪ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !