ವಿಶ್ವದ ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 132ನೇ ಜನ್ಮದಿನವನ್ನು ಇಂದು ರಾಜ್ಯದ ವಿವಿಧೆಡೆ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಮೈಸೂರು:
ಮೈಸೂರಿನಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮೈಸೂರು ಪುರಭವನದ ಎದುರು ಇರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 132 ಜನ್ಮದಿನವನ್ನು ಆಚರಿಸಲಾಯಿತು.
ಬಳಿಕ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ದೀಪಬೆಳಗಿಸಿ ಸಂವಿಧಾನಶಿಲ್ಪಿಯನ್ನು ಸ್ಮರಿಸಲಾಯಿತು.
ಈ ಸಂದರ್ಭ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಮಹಾನಗರ ಪಾಲಿಕೆಯ ಆಯುಕ್ತ ಜಿ.ಲಕ್ಷ್ಮಿಕಾಂತ್ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಡಿಸಿಪಿಗಳಾದ ಎಂ.ಮುತ್ತುರಾಜ್, ಎಸ್. ಜಾಹ್ನವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಕಲಬುರಗಿ:
ಕಲಬುರಗಿ ನಗರದ ಜಗತ್ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಪ್ರತಿಮೆಗೆ ಶುಕ್ರವಾರ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಮತ್ತು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಇದಕ್ಕು ಮುನ್ನ ಬುದ್ಧ ವಿಹಾರದ ಪೂಜ್ಯ ಸಂಗಾನಂದ ಭಂತೇಜಿ ಅವರ ನೇತೃತ್ವದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಬುದ್ಧ ವಂದನೆ ಸಲ್ಲಿಸಲಾಯಿತು.
ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ, ಡಿ.ಸಿ.ಪಿ.ಅಡ್ಡೂರು ಶ್ರೀನಿವಾಸಲು, ಎಸ್.ಪಿ. ಇಶಾ ಪಂತ್, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ಅವರು ಸಹ ಶ್ರೇಷ್ಟ ಆರ್ಥಿಕ ತಜ್ಞನಿಗೆ ಗೌರವ ಸಲ್ಲಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭ, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಮಹಾನಗರ ಪಾಲಿಕೆಯ ಕಾರ್ಯನಿರ್ವಹಕ ಅಭಿಯಂತ ಶಿವಣಗೌಡ ಪಾಟೀಲ, ಜಿಲ್ಲಾ ಎಸ್.ಸಿ- ಎಸ್.ಟಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಹುಬಳಿ, ಗೌರವಾಧ್ಯಕ್ಷ ಸೋಮಶೇಖರ ಮದನಕರ್ ಸೇರಿದಂತೆ ವಿವಿಧ ಸಮಾಜದ ಮುಖಂಡರು ಇದ್ದರು.
ಇದೇ ಸಂದರ್ಭದಲ್ಲಿ ಡಿ.ಸಿ. ಯಶವಂತ ವಿ. ಗುರುಕರ್ ಅವರು ಪಂಚಶೀಲ ಮತ್ತು ಪೂಜ್ಯ ಸಂಗಾನಂದ ಭಂತೇಜಿ ಅವರು ನೀಲ ಧ್ವಜಾರೋಹಣ ಮಾಡಿದರು.
ಮಂಡ್ಯ:
ಭಾರತ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ದುಡಿದು ಡಾ. ಬಿ.ಆರ್. ಅಂಬೇಡ್ಕರ್‌ರವರ ಸಮಸಮಾಜದ ಕನಸನ್ನು ನನಸು ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎಚ್.ಎನ್. ಗೋಪಾಲಕೃಷ್ಣ ಸಲಹೆ ನೀಡಿದರು.
ಇಂದು ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದ ಉದ್ಯಾನವನದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ 132 ಜನ್ಮದಿನಾಚರಣೆಯನ್ನುದ್ದೇಶಿಸಿ ಮಾತನಾಡಿದರು.
ಭಾರತವು ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುವುದರ ಜೊತೆಗೆ ಹಿಂದುಳಿದ ರಾಷ್ಟ್ರದಿಂದ ಮುಂದುವರೆದ ರಾಷ್ಟ್ರವಾಗಿ ಮಾರ್ಪಾಡಾಗುತ್ತಿದೆ. ಇದಕ್ಕೆ ಬಾಬಾ ಸಾಹೇಬರ ಕೊಡುಗೆ ಬಹಳ ಅನನ್ಯವಾದುದು ಎಂದು ಸ್ಮರಿಸಿದರು.
ಸರ್ಕಾರಗಳು ಹಾಗೂ ಸಾರ್ವಜನಿಕರು ಅವರ ತತ್ವ ಆದರ್ಶಗಳನ್ನ ಪಾಲನೆ ಮಾಡುತ್ತಾ ಅಂಬೇಡ್ಕರ್ ಅವರು ತೋರಿಸಿಕೊಟ್ಟ ದಿಕ್ಕಿನಲ್ಲಿ ನಡೆಯಬೇಕಿದೆ ಎಂದು ಪ್ರತಿಪಾದಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆ, ಅಸ್ಪಶ್ಯತಾ ನಿವಾರಣೆ ಹಾಗೂ ದೀನ ದಲಿತರರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ತಿಳಿಸಿದರು.
ಅಂಬೇಡ್ಕರ್ ಅವರು ಸ್ವಾತಂತ್ರ್ಯ ಬಂದ ನಂತರ ಇಡೀ ಭಾರತಕ್ಕೆ ವಿಶ್ವವೇ ಹೆಮ್ಮೆ ಪಡುವಂತಹ ಸಂವಿಧಾನವನ್ನು ರಚಿಸಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಡಾ.ಬಿ.ಆರ್ ಅಂಬೇಡ್ಕರ್ ಅವರು ಒಂದೇ ಧರ್ಮ ಜಾತಿ ಅಥವಾ ಜನಾಂಗಕ್ಕೆ ಸೇರಿದವರೆಲ್ಲ, ಅವರು ಎಲ್ಲಾ ವರ್ಗದ ಜನರಿಗೂ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ, ಹಾಗಾಗಿ ಅವರು ಪ್ರಪಂಚದ ಆಸ್ತಿಯಾಗಿದ್ದಾರೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಮಾತನಾಡಿ, ಪ್ರಜಾಪ್ರಭುತ್ವ ರೂವಾರಿ, ಮಾನವತಾವಾದಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಒಟ್ಟು ದೇಶದ ಹಿತವನ್ನು ಬಯಸಿದ ಅಪ್ರತಿಮ ರಾಷ್ಟ್ರ ನಾಯಕ ಎಂದು ಅವರು ಬಣ್ಣಿಸಿದರು.
ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ನಾವು ದೇಶಕ್ಕೆ ಮತ್ತೊಮ್ಮೆ ಪರಿಚಯಿಸುವ ಅಗತ್ಯವಿಲ್ಲ, ಏಕೆಂದರೆ ಅವರು ದೇಶಕ್ಕೆ ನೀಡಿದ ಕೊಡುಗೆಗಳಿಂದ ಈಗಾಗಲೇ ಜಗತ್ತಿಗೆ ಪರಿಚಯವಾಗಿದ್ದಾರೆ ಎಂದರು.
ಶಿಕ್ಷಣ ಒಬ್ಬ ವ್ಯಕ್ತಿಯನ್ನು ಮುಕ್ತ ಮನಸ್ಸಿನಿಂದ ತಾರ್ಕಿಕವಾಗಿ ಹಾಗೂ ಮುಕ್ತವಾಗಿ ಆಲೋಚಿಸುವಂತೆ ಮಾಡುವುದೇ ಆಗಿದೆ. ಶಿಕ್ಷಣ ಪಡೆದು ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ನೈತಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಇದರಿಂದ ಸದೃಢ ಸಮಾಜ ಮತ್ತು ರಾಷ್ಟ್ರವನ್ನು ಕಟ್ಟುವುದು ಸುಲಭವಾಗುತ್ತದೆ. ಶಿಕ್ಷಣ ಪಡೆದು ನಿಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವ ಹೋರಾಟಗಾರರಾಗಬೇಕಿದೆ ಎಂದು ಅಂಬೇಡ್ಕರ್ ಅವರು ಅಭಿಪ್ರಾಯಪಟ್ಟಿದ್ದರು. ಹಾಗಾಗಿ ಎಲ್ಲರೂ ಶಿಕ್ಷಣ ಪಡೆದು ಹೋರಾಟಗಳ ಮೂಲಕ ತಮ್ಮ ಹಕ್ಕು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜಕೀಯ ಸ್ವಾತಂತ್ರ್ಯದ ಜೊತೆಗೆ ವ್ಯಕ್ತಿಗೆ ಗೌರವ ತಂದುಕೊಡುವ ಸಾಮಾಜಿಕ ಸ್ವಾತಂತ್ರ್ಯ ಬೇಕೆಂದು ಸ್ವತಂತ್ರ ಚಳುವಳಿಯ ಸಮಯದಲ್ಲೆ ಪ್ರತಿಪಾದಿಸಿದರು.
ಅಂಬೇಡ್ಕರ್ ಅವರು ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ ಹಾಗೂ ಲಂಡನ್ನಿನ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಸಂಶೋಧನೆ ನಡೆಸಿ ಅರ್ಥಶಾಸ್ತ್ರದಲ್ಲಿ ಪ್ರೌಢ ಪ್ರಬಂಧಗಳನ್ನು ಮಂಡಿಸಿದ್ದರು. ಅದಕ್ಕೆ ಮಾನ್ಯತೆಯನ್ನು ಗಳಿಸಿದ್ದರು. ರೂಪಾಯಿಯ ಸಮಸ್ಯೆಗಳು: ಇದರ ಉಗಮ ಮತ್ತು ಪರಿಹಾರ ಕೃತಿಯು ಪ್ರಸ್ತುತ ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಉಪವಿಭಾಗಾಧಿಕಾರಿ ಹೆಚ್.ಎಸ್.ಕೀರ್ತನ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ.ಸಿದ್ದಲಿಂಗೇಶ್, ತಹಶೀಲ್ದಾರ್ ಆರ್.ವಿಜಯ್‌ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಕಾವ್ಯಶ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.