ಕಲುಷಿತಗೊಳ್ಳುತ್ತಿರುವ ಸಮಾಜವನ್ನು ತಿದ್ದುವ ಶಕ್ತಿ ಸಾಹಿತ್ಯಕ್ಕಿದೆ: ರಾಮೇಗೌಡ

ಹೊಸದಿಗಂತ ವರದಿ ಮಂಡ್ಯ :

ಧರ್ಮ ಮತ್ತು ರಾಜಕಾರಣದ ನಡುವೆ ಕಲುಷಿತಗೊಳ್ಳುತ್ತಿರುವ ಸಮಾಜವನ್ನು ತಿದ್ದುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಹೇಳಿದರು.

ಭೂಮಿಬೆಳಗು ಸಾಂಸ್ಕೃತಿಕ ಸಂಘ, ಮಂಗಲ ಇವರ ವತಿಯಿಂದ ನಗರದ ಗಾಂಧಿ ಭವನದಲ್ಲಿ ನಡೆದ ಸಂತೆಕಸಲಗೆರೆ ಪ್ರಕಾಶ್ ಅವರ ನಾಲಿಗೆ ಸವೆದ ಕುರುಹುಗಳಿಲ್ಲ ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದರು.

ಪಾಶ್ಚಿಮಾತ್ಯ ದೇಶಗಳಲ್ಲಿ ಪತ್ರಿಕೆಗಳು ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತಿವೆ. ಮಾಧ್ಯಮ ಪ್ರಜಾಪ್ರಭುತ್ವ ಕಾಯುವ ನಾಯಿಗಳು ಎಂಬ ಅಭಿಪ್ರಾಯ ಕೂಡ ಇದೆ. ಧರ್ಮವನ್ನು ರಾಜಕಾರಣಕ್ಕೆ ಒಳಪಡಿಸುತ್ತಿರುವುದರಿಂದ ಸಮಾಜದಲ್ಲಿ ಗಂಭೀರ ಪರಿಣಾಮ ಉಂಟಾಗಿದೆ. ಇದನ್ನು ಹೋಗಲಾಡಿಸಲು ಮಾಧ್ಯಮಗಳು ಆಳುವ ವರ್ಗವನ್ನು ಎಚ್ಚರಿಸುವ ಸಾಧನವಾಗಿ ಕೆಲಸ ಮಾಡಬೇಕಿದೆ ಎಂದು ಪ್ರತಿಪಾದಿಸಿದರು.

ಪುಸ್ತಕ ಕುರಿತು ಬುಡಕಟ್ಟು ಜಾನಪದ ಸಂಶೋಧಕ ಡಾ. ಹನಿಯೂರು ಚಂದ್ರೇಗೌಡ ಮಾತನಾಡಿ, ಕಾವ್ಯ ವಿವಿಧ ಸಂದರ್ಭಗಳಲ್ಲಿ ಹುಟ್ಟುತ್ತವೆ. ಕೋವಿಡ್ ಸಂದರ್ಭದಲ್ಲಿ ಉಂಟಾದ ಸಾವು-ನೋವು ನಮ್ಮನ್ನು ಗಂಭೀರವಾಗಿ ಕಾಡಿದೆ. ಅದರಂತೆ ಸಂತೆಕಸಲಗೆರೆ ಪ್ರಕಾಶ್ ಅವರ ನಾಲಿಗೆ ಸವೆದ ಕುರುಹುಗಳಿಲ್ಲ ಕವಿತೆಯಲ್ಲೂ ಕಂಡುಬರುತ್ತದೆ ಎಂದು ವಿವರಿಸಿದರು.

ಹಣವಂತರು ಹಣವನ್ನು ಖರ್ಚು ಮಾಡುತ್ತಿಲ್ಲ. ಅದೇ ರೀತಿ ಗುಣವಂತರು ಸಹ ಗುಣವನ್ನು ಸಮಾಜಕ್ಕೆ ಅರ್ಪಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸಾಹಿತ್ಯ ಮತ್ತು ಮಾಧ್ಯಮಗಳು ಈ ಮನಸ್ಥಿತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ಮಾತನಾಡಿ, ಸಾಹಿತ್ಯದ ಮೂಲ ವೌಲ್ಯಗಳನ್ನು ಕಾಪಾಡುವ ಅಗತ್ಯತೆ ಇದೆ. ಸಂವೇಧನಾಶೀಲ, ಸೃಜನಶೀಲ ಸಾಹಿತ್ಯಗಳು ಮುನ್ನಲೆಗೆ ಬರಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.

ರಾಜಪ್ರಭುತ್ವದಲ್ಲಿ ಪ್ರತಿಪಾದಿಸುತ್ತಿದ್ದ ಸಾಹಿತ್ಯದ ಧೋರಣೆಯಲ್ಲೇ ಸಾಹಿತ್ಯಗಳು ಹೊರ ಬರುವ ನಿಟ್ಟಿನಲ್ಲಿ ಒಂದು ಗುಂಪು ವ್ಯವಸ್ಥಿತ ಪಿತೂರಿ ನಡೆಸುತ್ತಿದೆ. ಇಂತಹ ಸಾಹಿತ್ಯದಿಂದ ಸಮಾಜವನ್ನು ಸರಿದಾರಿಗೆ ತರುವುದು ಅಸಾಧ್ಯ ಎಂದ ಅವರು, ಸಾಹಿತ್ಯವು ಸಮಕಾಲೀನ ರೀತಿಯಲ್ಲಿ ಪ್ರತಿಪಾದನೆಯಾಗಬೇಕಿದೆ ಎಂದು ಹೇಳಿದರು.

ವಿಚಾರವಾದಿ ಡಾ. ಮಜ್ಜಿಗೆಪುರ ಶಿವರಾಮ್ ಮಾತನಾಡಿ, ಸಾಹಿತ್ಯ ಕುಡಿದರಷ್ಟೇ ದಣಿವು. ಕವಿತೆ ಕಟ್ಟುವುದಲ್ಲ, ಅದು ಅಂತರಾಳದಿಂದ ಹುಟ್ಟಿ, ಹೃದಯಾಂತರಾಳದಿಂದ ಪುಟಿದ ಭಾವನೆಗಳು ಮನಸ್ಸಿನಿಂದ ಹೆಕ್ಕಿ ತೆಗೆದು ಅಕ್ಷರ ರೂಪ ಕೊಡುವುದೇ ಸಾಹಿತ್ಯ ಎಂದರು.

ಸಾಹಿತಿ ಸಂತೆಕಸಲಗೆರೆ ಪ್ರಕಾಶ್ ಅವರು ಭಾಷೆಯನ್ನು ಬಂಗಾರದ ರೀತಿಯಲ್ಲಿ ಬಳಕೆ ಮಾಡಿಕೊಂಡಿದ್ದಾರೆ. ಜೀವನ ಮತ್ತು ಬದುಕಿನ ಸಾರ, ತಾವು ಕಂಡು, ಕೇಳಿದ, ಅನುಭವಿಸಿದ ಕಥಾನಕಗಳನ್ನು ಕವಿತೆಗಳಲ್ಲಿ ಮೂಡಿಸಿದ್ದಾರೆ ಎಂದು ಬಣ್ಣಿಸಿದರು. ಅವರ ಸಾಹಿತ್ಯ ಬಿದಿರು ಒಡೆದು ಕುಂಬಳಕಾಯಿ ತಿರುಳು ತೆಗೆದಾಗ ಆಗುವ ತಂಬೂರಿಯಂತೆ ಕವಿತೆಗಳು ಒಡಮೂಡಿವೆ ಎಂದು ತಿಳಿಸಿದರು.

ಸಾಹಿತಿಯ ಸಂತೆಕಸಲಗೆರೆ ಪ್ರಕಾಶ್, ಭೂಮಿಬೆಳಗು ಸಾಂಸ್ಕೃತಿಕ ಸಂಘದ ಮಂಗಲ ಎಂ. ಯೋಗೀಶ್ ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!