ಅಂಬೇಡ್ಕರ್ ಪ್ರತಿಮೆ ಧ್ವಂಸ: ಮಹಾರಾಷ್ಟ್ರದಲ್ಲಿ ಹಿಂಸಾಚಾರ, ಪೊಲೀಸರಿಂದ ಅಶ್ರುವಾಯು ಶೆಲ್ ಪ್ರಯೋಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದಲ್ಲಿ ಮಂಗಳವಾರ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಎದುರು ಸಂವಿಧಾನದ ಪ್ರತಿಕೃತಿಯನ್ನು ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಇಂದು (ಬುಧವಾರ) ಪರ್ಭಾನಿ ನಗರದಲ್ಲಿ ಬಂದ್‌ಗೆ ಕರೆ ನೀಡಲಾಗಿತ್ತು. ಈ ಮಧ್ಯೆ ಪ್ರತಿಭಟನೆ ಹಿಂಸಾಚಾರಕ್ಕೂ ತಿರುಗಿದೆ. ಬುಧವಾರ ಮಧ್ಯಾಹ್ನ ಪ್ರತಿಭಟನಾಕಾರರು ಹಲವು ಪ್ರದೇಶಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆಯ ಗತಿಯನ್ನೆ ಬದಲಾಯಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್ ಗಳನ್ನು ಪ್ರಯೋಗಿಸಿದ್ದಾರೆ.

ನೂರಾರು ಜನರು ಸಂವಿಧಾನ ಪ್ರತಿಕೃತಿ ದ್ವಂಸ ಮಾಡಿದವರ ವಿರುದ್ಧ ಬೀದಿಗಿಳಿದಿದ್ದು, ಪರ್ಭನಿ ನಗರದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಸಂವಿಧಾನದ ಪ್ರತಿಕೃತಿಯನ್ನು ಹಾಳು ಮಾಡಿದವರನ್ನು ಪೊಲೀಸರು ಬಂಧಿಸಬೇಕು, ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಮಹಾರಾಷ್ಟ್ರದ ಪರ್ಭಾನಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಹೆದ್ದಾರಿ ಬಳಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್‌ ಅವರ ಪ್ರತಿಮೆ ಇದೆ. ಕೆಲವು ತಿಂಗಳ ಹಿಂದೆಯಷ್ಟೆ ಈ ಪ್ರತಿಮೆಗೆ ಇನ್ನಷ್ಟು ಮೆರುಗು ನೀಡಲಾಗಿತ್ತು. ಆ ಬಳಿಕ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಯ ಮುಂದೆ ಭಾರತೀಯ ಸಂವಿಧಾನದ ಪ್ರತಿಕೃತಿಯನ್ನು ಇಡಲಾಯಿತು.

ಆದರೆ ಈ ನಡುವೆ ಮಂಗಳವಾರ ಸಂಜೆ 4:30ರ ಸುಮಾರಿಗೆ ದುಷ್ಕರ್ಮಿಗಳು ಸಂವಿಧಾನದ ಪ್ರತಿಕೃತಿಯನ್ನು ವಿರೂಪಗೊಳಿಸಿದ್ದಾರೆ. ತಕ್ಷಣ ಎಚ್ಚೆತ್ತ ಜನರು ಆ ವ್ಯಕ್ತಿಯನ್ನು ಹಿಡಿದಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಮೊಂಡಾದ ಪೊಲೀಸರು ಸ್ಥಳಕ್ಕೆ ಆಗಮಿಸಿ ಈ ಕೃತ್ಯ ಎಸಗಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆದರೆ, ಈ ಘಟನೆಯನ್ನು ವಿರೋಧಿಸಿ ನಾಗರಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಪರ್ಭಾನಿ ನಗರದಲ್ಲಿ ಬೆಂಕಿ ಮತ್ತು ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ. ಇದನ್ನು ವಿರೋಧಿಸಿ ಹಲವು ಸಂಘಟನೆಗಳು ನಗರ ಬಂದ್‌ಗೆ ಕರೆ ನೀಡಿದ್ದವು. ಬಂದ್ ವೇಳೆ ಏಕಾಏಕಿ ಜನ ಆಕ್ರೋಶಗೊಂಡು, ವಾಹನಗಳಿಗೆ, ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಲು ಆರಂಭಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್ ಗಳನ್ನು ಪ್ರಯೋಗಿಸಿದರು.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!