ಪಂಚಮಸಾಲಿ ಪ್ರತಿಭಟನೆಯಲ್ಲಿ ಪೊಲೀಸರಿಂದಲೇ ಕಲ್ಲು ತೂರಾಟ: ಕೂಡಲ ಶ್ರೀ ಗಂಭೀರ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

2A ಮೀಸಲಾತಿಗಾಗಿ ಮಂಗಳವಾರ ಪಂಚಮಸಾಲಿ ಸಮುದಾಯ ನಡೆಸಿದ ಹೋರಾಟ ಹಿಂಸಾರೂಪಕ್ಕೆ ತಿರುಗಿತ್ತು. ಬೆಳಗಾವಿಯ ಸುವರ್ಣಸೌಧದ ಬಳಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಕೂಡ ಮಾಡಲಾಗಿತ್ತು.

ಇದೀಗ ನಮ್ಮವರ ಮೇಲೆ ಪೊಲೀಸರೇ ಕಲ್ಲುತೂರಾಟ ಮಾಡಿದ್ದಾರೆ ಎಂದು ಕೂಡಲಸಂಗಮ ಬಸವ ಜಯಮೃತ್ಯುಂಜಯ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೊಲೀಸರೇ ಸಿವಿಲ್ ಡ್ರೆಸ್ ಧರಿಸಿ ಬಂದು ಹಲ್ಲೆ ಮಾಡಿದ್ದರು. ದ್ವೇಷದಿಂದ ಕಲ್ಲು ಹೊಡೆಯುವ ಕೆಲಸವನ್ನು ಮಾಡಿದ್ದಾರೆ. ಲಿಂಗಾಯತ ಸಮಾಜದ ಕೋಟ್ಯಂತರ ಜನ ಕಣ್ಣೀರಿಡುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಕ್ಷಮೆ ಕೇಳಬೇಕು. ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರನ್ನ ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.

ವಕೀಲರು, ಮಹಿಳಾ ಹೋರಾಟಗಾರರ ಮೇಲೂ ಹಲ್ಲೆಯಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಹೀಗಾಗಿದ್ದಕ್ಕೆ ಬಹಳ ನೋವಾಯ್ತು. ದೊಡ್ಡ ಲಿಂಗಾಯತ ಸಮುದಾಯದ ಮೇಲೆ ದೌರ್ಜನ್ಯವಾಗಿದೆ. ದೌರ್ಜನ್ಯ ಮಾಡಿದ್ರೂ 2ಎ ಮೀಸಲಾತಿ ನಿಮಗೆ ಕೊಡಲು ಆಗಲ್ಲ ಅಂತಾ ಸಿಎಂ ಹೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಡಿಸೆಂಬರ್ 12ರಂದು ರಸ್ತೆ ತಡೆದು ಹೋರಾಟ ಮಾಡುವಂತೆ ರಾಜ್ಯಾದ್ಯಂತ ಪಂಚಮಸಾಲಿಗರಿಗೆ ಜಯಮೃತ್ಯುಂಜಯಶ್ರೀ ಕರೆ ನೀಡಿದ್ದಾರೆ. ನಿಮ್ಮ ಊರಲ್ಲಿ ರಸ್ತೆ ತಡದು ಹೋರಾಟ ಮಾಡಿ. ನಾಳೆ ಹಿರೇಬಾಗೇವಾಡಿ ಟೋಲ್ ನಾಕಾ ಬಂದ್ ಮಾಡುತ್ತೇವೆ. ಯಾವುದೇ ಕಾರಣಕ್ಕೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.

ಇನ್ಮುಂದೆ ಚೆನ್ನಮ್ಮನಂತೆ ಕ್ರಾಂತಿ ಹೋರಾಟ ಮಾಡುತ್ತೇವೆ. ಈವರೆಗೂ ಲಿಂಗಾಯತ ವಿರೋಧಿ ಮುಖ್ಯಮಂತ್ರಿ ಅಂತಿದ್ರು. ನಾವು ಹಾಗೆ ಅಂದುಕೊಂಡಿರಲಿಲ್ಲ ಆದ್ರೀಗ ಹಾಗೆ ಅನಿಸ್ತಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಎಂದು ವಾಗ್ದಾಳಿ ಮಾಡಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!