ಹೊಸದಿಗಂತ ಡಿಜಿಟಲ್ ಡೆಸ್ಕ್:
ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ತುರ್ತು ಚಿಕಿತ್ಸಾ ವಾಹನಗಳ ಜೀವನಾಡಿಯಾಗಿರುವ ‘ಆರೋಗ್ಯ ಕವಚ 108’ ಯೋಜನೆಯ ನೌಕರರು ಮುಷ್ಕರದ ಎಚ್ಚರಿಕೆ ನೀಡಿದ್ದಾರೆ.
ತಮ್ಮ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ 15 ದಿನಗಳ ಗಡುವು ನೀಡಲಾಗಿದ್ದು, ನಿರ್ಲಕ್ಷ್ಯ ಮುಂದುವರಿದರೆ ಸೆ. 20 ರಿಂದ ಸಾಮೂಹಿಕವಾಗಿ ಕೆಲಸಕ್ಕೆ ರಾಜೀನಾಮೆ ನೀಡಿ ಬೀದಿಗಿಳಿಯುವುದಾಗಿ ಸಂಘಟನೆಗಳು ತಿಳಿಸಿವೆ.
ಈ ಕುರಿತು ಕರ್ನಾಟಕ ರಾಜ್ಯ ಆರೋಗ್ಯ ಕವಚ ಆಂಬುಲೆನ್ಸ್ ನೌಕರರ ಸಂಘ’ದ ಪದಾಧಿಕಾರಿಗಳು ಆರೋಗ್ಯ ಸಚಿವರು ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಅಧಿಕೃತವಾಗಿ ಪತ್ರ ಬರೆದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಪ್ರಸ್ತುತ ಜಿವಿಕೆ ಸಂಸ್ಥೆಯ ಅಧೀನದಲ್ಲಿ ರಾಜ್ಯಾದ್ಯಂತ ಸುಮಾರು 35,000 ಕಾರ್ಮಿಕರು ಶ್ರಮಿಸುತ್ತಿದ್ದಾರೆ ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
ನೌಕರರ ಬೇಡಿಕೆಗಳೇನು?
ಪ್ರಸ್ತುತ ಜಾರಿಯಲ್ಲಿರುವ ವಲಯವಾರು ವೇತನ ವಿಂಗಡಣೆಯನ್ನು ರದ್ದುಪಡಿಸಿ, ರಾಜ್ಯಾದ್ಯಂತ ಎಲ್ಲರಿಗೂ ‘ಏಕರೂಪ ವಲಯ’ ವೇತನ ನಿಗದಿಪಡಿಸಬೇಕು. ಕರ್ತವ್ಯದ ಅವಧಿಯಲ್ಲಿ ಅಪಘಾತಕ್ಕೀಡಾಗಿ ಮೃತಪಡುವ ಸಿಬ್ಬಂದಿಯ ಕುಟುಂಬಕ್ಕೆ 50 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಬೇಕು. ನೌಕರರ ಹಿರಿತನದ ಆಧಾರದ ಮೇಲೆ ಮಾಸಿಕ ವೇತನವನ್ನು ಮರುಪರಿಶೀಲಿಸಬೇಕು. ಕಾರ್ಮಿಕ ಇಲಾಖೆಯ ನಿಯಮಾವಳಿಗಳ ಪ್ರಕಾರ ಪ್ರತಿ ತಿಂಗಳ 7ನೇ ತಾರೀಖಿನ ಒಳಗಾಗಿ ಕಡ್ಡಾಯವಾಗಿ ವೇತನ ಪಾವತಿಯಾಗಬೇಕು ಹಾಗೂ ಅಂಬುಲೆನ್ಸ್ ನಿಲ್ಲಿಸುವ ಎಲ್ಲಾ ನಿಲ್ದಾಣಗಳಲ್ಲಿ ನೌಕರರಿಗೆ ವಿಶ್ರಾಂತಿ ಕೊಠಡಿ, ಶೌಚಾಲಯ, ವಾಹನಗಳನ್ನು ತೊಳೆಯಲು ಸೂಕ್ತ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:
ಮುಷ್ಕರ ನಡೆಸಿದರೆ ಕಠಿಣ ಕ್ರಮ
ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ ಖಾದರ್, ಸರ್ಕಾರ ನೇರವಾಗಿ ಇವರಿಗೆ ಕೆಲಸ ನೀಡಿಲ್ಲ. ಅಂಬುಲೆನ್ಸ್ ಸೇವೆಯನ್ನು ಗುತ್ತಿಗೆ ಸಂಸ್ಥೆಯೊಂದರ ಮೂಲಕ ನಡೆಸಲಾಗುತ್ತಿದೆ. ಚಾಲಕರಿಗೆ ಏನಾದರೂ ಸಮಸ್ಯೆ ಇದ್ದರೆ ಅವರು ಗುತ್ತಿಗೆ ಕಂಪನಿಯೊಂದಿಗೆ ಮಾತನಾಡಿಕೊಳ್ಳಲಿ ಎಂದಿದ್ದಾರೆ.
ಮುಂದುವರಿದು ಮಾತನಾಡಿದ ಸಚಿವರು, ಕಂಪನಿಯು ಒಪ್ಪಂದದಂತೆ ವೇತನ ನೀಡದಿದ್ದರೆ ಮಾತ್ರ ನಾವು ಮಧ್ಯಪ್ರವೇಶಿಸುತ್ತೇವೆ. ನಮಗೆ ರೋಗಿಗಳ ಜೀವ ಮುಖ್ಯ. ಮುಷ್ಕರದ ಹೆಸರಲ್ಲಿ ರೋಗಿಗಳಿಗೆ ತುರ್ತು ಚಿಕಿತ್ಸೆ ಸಿಗದೆ ತೊಂದರೆಯಾದರೆ, ಚಾಲಕರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಅದಕ್ಕೆ ಕಂಪನಿಯನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.



