ಶೀಘ್ರದಲ್ಲೇ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಬ್ರೇಕ್ ಹಾಕಲು ತಿದ್ದುಪಡಿ: ಸಚಿವ ಕೆ.ವೆಂಕಟೇಶ್

ಹೊಸದಿಗಂತ ವರದಿ, ಮೈಸೂರು:

ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಬ್ರೇಕ್ ಹಾಕಲು ಸಹಕಾರಿ ಕಾಯ್ದೆಗೆ ಶೀಘ್ರದಲ್ಲೇ ತಿದ್ದುಪಡಿ ತರಲಾಗುವುದು ಎಂದು ಪಶುಸಂಗೋಪನಾ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಚಿಟ್ಟೇನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ 70 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ರೈತರ, ದುರ್ಬಲರ ಆರ್ಥಿಕ ಸ್ವಾವಲಂಬನೆಗಾಗಿ ಸ್ಥಾಪನೆಯಾದ ಸಹಕಾರ ಸಂಘಗಳಲ್ಲಿ ರಾಜಕೀಯ ಹಸ್ತಕ್ಷೇಪ ಆರಂಭವಾಗಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ರೈತರ, ದುರ್ಬಲರ ಬಗ್ಗೆ ಬದ್ದತೆ ಮತ್ತು ಕಾಳಜಿ ಇಟ್ಟುಕೊಂಡು ಆರಂಭವಾದ ಸಹಕಾರ ಸಂಘ ಆರಂಭವಾಗಿ ಅಂದಿನಿoದಲೂ ರೈತರ ಜೀವನಾಡಿಯಾಗಿ ಕೆಲಸ ಮಾಡುತ್ತಿದೆ ಎಂದರು.

ಇನ್ನು ಇದರ ಏಳಿಗೆಗೆ ಅನೇಕ ಮಹನೀಯರು ಶ್ರಮಿಸಿ ಈ ಸಂಸ್ಥೆಯನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ಆದರೆ ಇತ್ತೀಚೆಗೆ ಈ ಸಂಘದಲ್ಲಿ ರಾಜಕೀಯ ಹಸ್ತಕ್ಷೇಪ ಆರಂಭವಾಗಿ ಈ ಸಂಸ್ಥೆಗಳನ್ನು ತಮ್ಮ ಸ್ವಂತ ಮನೆಯ ಆಸ್ತಿ ಎನ್ನುವಂತೆ ಮಾಡಿಕೊಂಡು ಕೆಲವರು ಆಳವಾಗಿ ಬೇರೂರಲು ಯತ್ನಿಸುತ್ತಿದ್ದಾರೆ. ಇಲ್ಲಿ ಕೆಲಸ ಮಾಡುವ ಅಧಿಕಾರಿಗಳು ರೈತರ ಹಿತ ಕಾಯುವ ಬದಲಾಗಿ ಸಂಘವನ್ನು ದುರ್ಬಳಕೆ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಹಾಗಾಗಿ ಇವರು ಅಧಿಕಾರಿಗಳೋ, ರಾಜಕಾರಣಿಗಳೋ ಎಂದು ತಿಳಿಯದಾಗಿದೆ. ಹಾಗಾಗಿ ಈ ಕಾಯ್ದೆಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಸರ್ಕಾರ ಆಲೋಚಿಸಿದೆ ಎಂದರು.

ಇತಿಮಿತಿಯಲ್ಲಿ ಸಾಲ ಮಾಡಬೇಕು: ರೈತ ತಾನು ಮಾಡುವ ಸಾಲಕ್ಕೆ ಲೆಕ್ಕಪತ್ರ ಇಟ್ಟುಕೊಳ್ಳಬೇಕು ಖಾಸಗಿ ಸಂಸ್ಥೆಗಳು ಬಡ್ಡಿಯ ಆಸೆಗಾಗಿ ಹೇರಳವಾಗಿ ಸಾಲ ನೀಡುತ್ತಾರೆ. ಇವರ ಆಮಿಷಕ್ಕೆ ರೈತರು ಬಲಿಯಾಗಬಾರದು, ಸರ್ಕಾರ ಸಹಕಾರ ಸಂಘದ ಮೂಲಕ ನೀಡುವ ಸಾಲ ಪಡೆದು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು.

ಸಹಕಾರ ಸಂಘವು ರೈತರಿಗೆ 5 ಲಕ್ಷದ ವರೆಗೆ ಶೂನ್ಯ ಬಡ್ಡಿ, 15 ಲಕ್ಷದ ವರೆಗೆ ಶೇ.3% ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ ಹೀಗಿದ್ದರೂ ಖಾಸಗಿ ಬ್ಯಾಂಕುಗಳಲ್ಲಿ ಅಧಿಕ ಬಡ್ಡಿ ದರದಲ್ಲಿ ಸಾಲ ಪಡೆದು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಜಿಲ್ಲಾ ಸಹಕಾರ ಯೂನಿಯನ್ ಒಕ್ಕೂಟದ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿ ಕೆಲಸ ಮಾಡುತ್ತಾ ದೇಶದ ಆರ್ಥಿಕ ಪ್ರಗತಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿವೆ. ಆದ್ದರಿಂದ ಸಹಕಾರ ಸಂಘ ನೀಡುವ ಸಾಲ ಸೌಲಭ್ಯವನ್ನು ಪಡೆದು ರೈತರು ಸಕಾಲಕ್ಕೆ ಮರು ಪಾವತಿ ಮಾಡುವ ಮೂಲಕ ಸಹಕಾರ ಸಂಘವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದರು.

ಚಿಕ್ಕಮಗಳೂರು ಸಹಕಾರ ಯೂನಿಯನ್ ಒಕ್ಕೂಟದ ಅಧ್ಯಕ್ಷ ಲಕ್ಕಪ್ಪ ಗೌಡ, ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್, ಎಂಸಿಡಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನೋದ್ ಕುಮಾರ್, ಸಹಕಾರ ಸಂಘಗಳ ಉಪ ನಿಬಧಕ ಮಂಜುನಾಥ್, ಸಹಕಾರ ಅಭಿವೃದ್ಧಿ ಅಧಿಕಾರಿ ಜೆ.ಹಿತೇಂದ್ರ, ಬಿ.ಎಸ್.ರಾಮಚಂದ್ರ, ಚಿಟ್ಟೇನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಟಿ.ಸುರೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!