ಸೋಲನ್ನು ಸವಾಲಾಗಿ ಸ್ವೀಕರಿಸಿ ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕು: ಶ್ರೀರಾಮುಲು

ಹೊಸದಿಗಂತ ವರದಿ, ಮೈಸೂರು:

ವಿಧಾನಸಭೆಯ ಚುನಾವಣೆಯ ಸೋಲನ್ನು ಸವಾಲಾಗಿ ಸ್ವೀಕರಿಸಿ ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು. ರಾಜ್ಯದ 28 ಸ್ಥಾನಗಳನ್ನೂ ಪಕ್ಷ ಗೆಲ್ಲಬೇಕು. ಇದಕ್ಕಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಮಂಗಳವಾರ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಪಕ್ಷ ಭರ್ಜರಿ ಜಯಗಳಿಸಬೇಕಾಗಿದೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೆ ಅಧಿಕಾರಕ್ಕೆ ತರಬೇಕಾಗಿದೆ.

ಅದಕ್ಕಾಗಿ ಪಕ್ಷದ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಜೋಡೆತ್ತುಗಳಂತೆ ಪ್ರಬಲವಾಗಿ ಪಕ್ಷ ಸಂಘಟನೆ ಮಾಡಲಿದ್ದಾರೆ ಎಂದು ಹೇಳಿದರು.

ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರನ್ನಾಗಿ ಬಿ.ವೈ. ವಿಜಯೇಂದ್ರ ಅವರನ್ನು ಹೈಕಮಾಂಡ್ ನೇಮಕ ಮಾಡಿದ ಬಳಿಕ, ಬೀದರ್‌ನಿಂದ- ಚಾಮರಾಜನಗರ ಜಿಲ್ಲೆಯ ತನಕ ಬದಲಾವಣೆ,ಹುರುಪು ಕಾಣಿಸಿಕೊಂಡಿದೆ. ಕಾರ್ಯಕರ್ತರು ಹೊಸ ಉತ್ಸಾಹದಿಂದ, ಹುರುಪಿನಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಬಿ.ವೈ.ವಿಜಯೇಂದ್ರ ಮತ್ತು ಆರ್.ಅಶೋಕ್ ನೇಮಕ ಉತ್ತಮವಾಗಿದೆ. ಹೈಕಮಾಂಡ್ ತೀರ್ಮಾನ ಒಳ್ಳೆಯದಾಗಿದೆ. ಅಧ್ಯಕ್ಷ ಹಾಗೂ ವಿಪಕ್ಷ ನಾಯಕ ಸ್ಥಾನಕ್ಕೆ ಒಬ್ಬರನ್ನು ನೇಮಕ ಮಾಡಿದ ಮೇಲೆ ಆ ಸ್ಥಾನದ ಆಕಾಂಕ್ಷಿಗಳಾಗಿದ್ದವರಿಗೆ ಸಣ್ಣಪುಟ್ಟ ಅಸಮಾಧಾನವಾದರೂ ಕೂಡ, ಅವರೆಲ್ಲಾ ಪಕ್ಷದ ಸಂಘಟನೆಗೆ ಕೆಲಸ ಮಾಡುವ ಮಾತುಗಳನ್ನಾಡಿದ್ದಾರೆ ಎಂದು ತಿಳಿಸಿದರು. ವಿಧಾನಸಭಾ ಚುನಾವಣೆಯಲ್ಲಿ ನಾನಾ ಕಾರಣಕ್ಕಾಗಿ ಸೋಲು ಕಂಡಿದ್ದೇವೆ. ಈಗ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಬೇಕಾದರೆ ಸೋಲನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ಕರ್ನಾಟಕದಲ್ಲಿ 25ಸ್ಥಾನಗಳನ್ನು ಗೆಲ್ಲಬೇಕು. ಹಾಗಾಗಿ, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಖಂಡಿತ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಬಹುದು ಎಂದರು.

ಸಭೆಯಲ್ಲಿ ರಾಜ್ಯ ಕಾಂಪೊಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಮೈಸೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಶಿವಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಎಂ.ಸತೀಶ್,ಸ್ಲಮ್ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು, ಮೈಸೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಮಂಗಳ ಸೋಮಶೇಖರ್, ಎಸ್‌ಟಿ ಮೋರ್ಚಾ ಅಧ್ಯಕ್ಷ ಲಕ್ಷ÷್ಮಣ್, ಚಿಕ್ಕರಂಗನಾಯಕ, ಪ್ರಧಾನ ಕಾರ್ಯದರ್ಶಿ ವಾಣೀಶ್ ಕುಮಾರ್, ಮಾಜಿ ಉಪ ಮಹಾಪೌರರಾದ ರತ್ನ, ಯುವ ಮೋರ್ಚಾ ರಾಜ್ಯಕಾರ್ಯಕಾರಿ ಸಮಿತಿ ಸದಸ್ಯ ಹಂಚ್ಯಾರವಿ, ಎನ್.ಬ್ರಹ್ಮಾಚಾರ್,ಕ್ಯಾತಮಾರನಹಳ್ಳಿ ಪ್ರಕಾಶ್, ಎನ್.ಎಸ್.ಪ್ರಭಾಕರ್, ಸುಣ್ಣದಕೇರಿ ವಿಜಯಕುಮಾರ್ ಮತ್ತಿತರರು ಹಾಜರಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!