ಹೊಸ ದಿಗಂತ ಡಿಜಿಟಲ್ ಡೆಸ್ಕ್
ಆಸ್ಟ್ರೇಲಿಯ ಪ್ರವಾಸದಲ್ಲಿರುವ ವಿದೇಶ ಮಂತ್ರಿ ಎಸ್ ಜೈಶಂಕರ್ ಅವರು, ಭಾರತವೇಕೆ ರಷ್ಯದಿಂದ ಅಷ್ಟೆಲ್ಲ ಶಸ್ತ್ರಾಸ್ತ್ರ ವಹಿವಾಟು ಹೊಂದಿದೆ ಎಂಬ ಪ್ರಶ್ನೆಗೆ ಶಾಂತಚಿತ್ತದಿಂದಲೇ ಕೊಟ್ಟ ಅತಿ ಮೊನಚಿನ ಉತ್ತರ ಬಹಳ ಟ್ರೆಂಡ್ ಆಗಿದೆ. ಅವರು ಹೇಳಿದ್ದು- “ರಷ್ಯದ ಜತೆ ಶಸ್ತ್ರ ವಹಿವಾಟಿಗೆ ಹಲವು ಕಾರಣಗಳಿವೆ. ಅವುಗಳಲ್ಲೊಂದು ಪಾಶ್ಚಾತ್ಯ ದೇಶಗಳು ಈ ಹಿಂದಿನ ದಶಕಗಳಲ್ಲಿ ಭಾರತಕ್ಕೆ ಶಸ್ತ್ರ ಪೂರೈಸದೇ ನಮ್ಮ ನೆರೆಯ ಸರ್ವಾಧಿಕಾರಿ ದೇಶವನ್ನು ಸಹಭಾಗಿಯನ್ನಾಗಿ ಮಾಡಿಕೊಂಡವು.”
ಹೀಗೆನ್ನುವ ಮೂಲಕ ಜೈಶಂಕರ್ ಅವರು 1970-80ರ ದಶಕದಲ್ಲಿ ಅಮೆರಿಕವು ಅವತ್ತಿನ ಪಾಕಿಸ್ತಾನಿ ಮಿಲಿಟರಿ ಆಡಳಿತವನ್ನು ಬೆಂಬಲಿದ್ದರ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದರು.
ಈ ಹಿನ್ನೆಲೆಯಲ್ಲೇ ನೀವು ಈ ಲೇಖನದ ಜತೆ ನೋಡುತ್ತಿರುವ ಫೋಟೊ ಅವತ್ತಿನ ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಮತ್ತು ಅಂದಿನ ಪಾಕಿಸ್ತಾನಿ ಮಿಲಿಟರಿ ಸರ್ವಾಧಿಕಾರಿ ಜಿಯಾ ಉಲ್ ಹಕ್ ಅವರ ಭೇಟಿಯದ್ದಾಗಿದೆ.
1977ರ ದುಲೈನಲ್ಲಿ ಭುಟ್ಟೋರನ್ನು ಪದಚ್ಯುತಗೊಳಿಸಿ ಪಾಕಿಸ್ತಾನವನ್ನು ಮಿಲಿಟರಿ ಆಡಳಿತದಡಿಗೆ ತಂದಾತ ಜನರಲ್ ಜಿಯಾ ಉಲ್ ಹಕ್. ಪಾಕಿಸ್ತಾನವೆಂಬುದೇ ಮತಾಂಧತೆಗಾಗಿ ಹುಟ್ಟಿದ ದೇಶ ಹೌದಾದರೂ, ಆ ಮತಾಂಧತೆ ಉನ್ನತಿಗೆ ಹೋಗಿದ್ದು ಈತನ ಆಡಳಿತಾವಧಿಯಲ್ಲಿ. ಅಲ್ಲಿನ ಪಠ್ಯಗಳಲ್ಲಿ ಹಿಂದು ದ್ವೇಷ ಬಿತ್ತನೆಯಾಗಿದ್ದು, ತೀವ್ರ ಇಸ್ಲಾಮೀಕರಣವಾಗಿದ್ದು ಈತನ ಅವಧಿಯಲ್ಲಿ. ಜಿಯಾ ಉಲ್ ಹಕ್ ಗೆ ಶಸ್ತ್ರ ಮತ್ತು ಫಂಡ್ ಕೊಟ್ಟು ಪ್ರೋತ್ಸಾಹಿಸಿದ್ದು ಅವತ್ತಿನ ಅಮೆರಿಕದ ರೋನಾಲ್ಡ್ ರೇಗನ್ ಆಡಳಿತ. ತಾವು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಸರ್ವಾಧಿಕಾರಿಗೆ ಸಹಾಯ ಮಾಡುತ್ತಿದ್ದೇವೆ ಎಂಬ ಯಾವ ಮೌಲ್ಯಗಳೂ ಅಮೆರಿಕಕ್ಕೆ ಅವತ್ತು ನೆನಪಾಗಲಿಲ್ಲ. ಪಾಕಿಸ್ತಾನವನ್ನು ಬಲಪಡಿಸುವುದರ ಮೂಲಕ ಪಕ್ಕದ ಅಫಘಾನಿಸ್ತಾನದಿಂದ ಸೋವಿಯತ್ ಅನ್ನು ಓಡಿಸುವ ಕಾರ್ಯಸೂಚಿಯಲ್ಲಿ ಅದು ಮಗ್ನವಾಗಿತ್ತು. 1980ರಲ್ಲಿ ಪಾಕಿಸ್ತಾನ ಅಣ್ವಸ್ತ್ರ ತಯಾರಿಕೆಯಲ್ಲಿ ತೊಡಗಿಕೊಂಡಿರುವುದು ಗೊತ್ತಿದ್ದೂ ಅಮೆರಿಕ ಸುಮ್ಮನಿರುವುದಕ್ಕೂ ಈ ಮೈತ್ರಿ ಕಾರಣವಾಯಿತು.
ಕೊನೆಗೊಮ್ಮೆ ಜಿಯಾ ಉಲ್ ಹಕ್ ವಿಮಾನ ಅವಘಡದಲ್ಲಿ ಸಂಶಯಾಸ್ಪದವಾಗಿ ಸತ್ತ ಎಂಬುದು ಚರಿತ್ರೆ. ಅದೇನೆ ಇದ್ದರೂ ಜೈಶಂಕರ್ ಆಡಿರುವ ಎರಡು-ಮೂರೇ ಮಾತುಗಳು ಅಮೆರಿಕದ ಕೈಮೇಲಿರುವ ರಕ್ತದ ಗುರುತುಗಳನ್ನು ಮತ್ತೆ ಜನರೆದುರು ತಂದಂತಾಗಿದೆ.