Tuesday, December 6, 2022

Latest Posts

ತಮಿಳು ಐಡೆಂಟಿಟಿ ಸಹ ವೇದಮೂಲದ್ದೇ- ಇತಿಹಾಸಕಾರ ಸಂಜೀವ್ ಸಾನ್ಯಾಲ್ ಕೊಟ್ಟರು ಪುರಾವೆ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಚೋಳರು ಹಿಂದುಗಳಾಗಿದ್ದರೋ ಇಲ್ಲವೋ ಎಂದು ಹುಟ್ಟಿಕೊಂಡಿರುವ ಚರ್ಚೆ ಎಲ್ಲರಿಗೂ ಗೊತ್ತಿರುವಂಥದ್ದೇ. ಚೋಳರು ಹಿಂದುಗಳಾಗಿರಲಿಲ್ಲ ಎಂಬ ವಾದವನ್ನು ಹಲವರು ಅದಾಗಲೇ ತರ್ಕಬದ್ಧವಾಗಿ ಅಲ್ಲಗೆಳೆದಿದ್ದಾರೆ.

ಆದರೆ, ಪಿ ಎಸ್-1 ಹಿನ್ನೆಲೆಯ ಈ ಚರ್ಚೆ ಉದಾಹರಣೆ ಮಾತ್ರ. ತಮಿಳು ಐಡೆಂಟಿಟಿ ಎಂಬುದು ವೈದಿಕ ಪರಂಪರೆಗೆ ವಿರುದ್ಧವಾದದ್ದು ಎಂದು ಬಿಂಬಿಸುವ ಯತ್ನ ಲಾಗಾಯ್ತಿನಿಂದ ಆಗಿದೆ. ಟೈಮ್ಸ್ ನೌ ವಾಹಿನಿಗೆ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸುತ್ತ, ವಿದ್ವಾಂಸ ಸಂಜೀವ್ ಸಾನ್ಯಾಲ್ ಅವರು ಈ ನಿಟ್ಟಿನಲ್ಲಿ ಸ್ಪಷ್ಟ ದಾಖಲೆಯೊಂದನ್ನು ಮುನ್ನೆಲೆಗೆ ತಂದಿದ್ದಾರೆ.

ಸಂಗಮ ಸಾಹಿತ್ಯವು ತಮಿಳರ ಅತಿ ಪ್ರಾಚೀನ ಸಾಹಿತ್ಯಸೃಷ್ಟಿಯಾಗಿದ್ದು ಕ್ರಿಸ್ತಪೂರ್ವ 3 ಮತ್ತು ಕ್ರಿಸ್ತಶಕ 3ರ ನಡುವೆ ರಚನೆಯಾಗಿವೆ ಎನ್ನಲಾದ ಸಾಹಿತ್ಯ ಇದು. ಈ ಪೈಕಿ ತೊಲ್ಕಾಪಿಯಂ ಎಂಬ ತಮಿಳು ವ್ಯಾಕರಣ ಗ್ರಂಥವನ್ನು ಉದಾಹರಿಸುತ್ತಾರೆ ಸಂಜೀವ್ ಸನ್ಯಾಲ್. ಅದರ ಪ್ರಾರಂಭ ಭಾಗದಲ್ಲಿ ತಮಿಳರೆಂದರೆ ಯಾರು, ಅವರ ಐಡೆಂಟಿಟಿ ಏನು ಎಂಬುದನ್ನು ಬರೆಯಲಾಗಿದೆ. ತಮಿಳು ಮಾತನಾಡುವವರು ವೆಂಕಟಂ (ಈಗಿನ ತಿರುಪತಿ)ನಿಂದ ಕುಮಾರಿಯಂ (ಈಗಿನ ಕನ್ಯಾಕುಮಾರಿ)ವರೆಗೆ ಹರಡಿದ್ದಾರೆ ಎನ್ನುತ್ತ, ಮುಂದುವರಿದು ನಾಲ್ಕು ವೇದಗಳ ಪ್ರಜ್ಞೆಯಿಂದಲೇ ಈ ಐಡೆಂಟಿಟಿ ರೂಪುಗೊಂಡಿದೆ ಎನ್ನುತ್ತದೆ.

ತಮಿಳು ಪ್ರಾಚೀನ ಗ್ರಂಥವೇ ಇಷ್ಟು ಸ್ಪಷ್ಟವಾಗಿ ತಮಿಳು ಐಡೆಂಟಿಟಿ ಹೇಳಿರುವಾಗ ಬೇರೆ ವಾದಗಳಿಗೆಲ್ಲಿ ಜಾಗವಿದೆ ಎಂದು ಪ್ರಶ್ನಿಸಿದ್ದಾರೆ ಸಂಜೀವ ಸನ್ಯಾಲರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!