ಹೊಸದಿಂಗತ ಡಿಜಿಟಲ್ ಡೆಸ್ಕ್:
ಯೆಮೆನ್‌ನಲ್ಲಿ ಹೌತಿ ಬಂಡುಕೋರರ ನೆಲೆಗಳ ಮೇಲೆ ಅಮೆರಿಕ ಹಾಗೂ ಬ್ರಿಟನ್ ವಾಯುದಾಳಿಗಳನ್ನು ಪ್ರಾರಂಭಿಸಿವೆ. ಕೆಂಪು ಸಮುದ್ರದಲ್ಲಿ ಅಂತಾರಾಷ್ಟ್ರೀಯ ಹಡಗು ಸಾರಿಗೆಯ ಮೇಲೆ ಹೌತಿ ಬಂಡುಕೋರರು ದಾಳಿಗಳನ್ನು ನಡೆಸಲು ಆರಂಭಿಸಿದ ಬಳಿಕ ಇದೇ ಮೊದಲ ಬಾರಿಗೆ ಈ ದಾಳಿಗಳು ನಡೆಯುತ್ತಿವೆ.
ಯೆಮೆನ್‌ನಲ್ಲಿ ಹಲವು ಕಡೆ ವಾಯದಾಳಿಗಳು ಹಾಗೂ ಸ್ಫೋಟಗಳು ಆಗಿರುವುದನ್ನು ಸಾಕ್ಷಿಗಳು ದೃಢಪಡಿಸಿವೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಗುರುವಾರ ಮಾತನಾಡಿ, ಅಗತ್ಯವಿದ್ದರೆ ಮುಂದಿನ ಕ್ರಮವನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದಿದ್ದಾರೆ.
“ಈ ಉದ್ದೇಶಿತ ದಾಳಿಗಳು, ಅಮೆರಿಕ ಮತ್ತು ನಮ್ಮ ಪಾಲುದಾರರ ಮೇಲಿನ ದಾಳಿಯನ್ನು ನಾವು ಸಹಿಸುವುದಿಲ್ಲ ಅಥವಾ ಬಂಡುಕೋರರು ನಮ್ಮ ಸಮುದ್ರ ಸಾರಿಗೆ ಹಕ್ಕನ್ನು ಹಾಳುಮಾಡಲು ಬಿಡುವುದಿಲ್ಲ ಎಂಬುದರ ಸ್ಪಷ್ಟ ಸಂದೇಶವಾಗಿದೆ” ಎಂದು ಬೈಡೆನ್ ಹೇಳಿದರು. “ವ್ಯಾಪಾರಿ ಶಿಪ್ಪಿಂಗ್‌ಗೆ ಬೆದರಿಕೆ ಒಡ್ಡುವ ಹೌತಿಗಳ ಕಾರ್ಯಕ್ಕೆ ನಾವು ಹೊಡೆತ ನೀಡಿದ್ದೇವೆ” ಎಂದು ಬ್ರಿಟನ್‌ನ ರಕ್ಷಣಾ ಸಚಿವಾಲಯ ಹೇಳಿದೆ.
ಯೆಮೆನ್ ರಾಜಧಾನಿ ಸನಾ, ಸಾದಾ, ಧಮರ್ ಮತ್ತು ಹೊಡೆಡಾ ಗವರ್ನರೇಟ್‌ನಲ್ಲಿ ದಾಳಿಗಳಾಗಿರುವುದನ್ನು ಹೌತಿ ಅಧಿಕಾರಿಯೊಬ್ಬ ದೃಢಪಡಿಸಿದ್ದಾರೆ. ಈಗ ನಡೆಯುತ್ತಿರುವ ಈ ದಾಳಿಗಳು, ಅಕ್ಟೋಬರ್‌ನಲ್ಲಿ ಇಸ್ರೇಲ್- ಹಮಾಸ್ ನಡುವೆ ಸ್ಫೋಟಗೊಂಡ ಯುದ್ಧದ ವಿಸ್ತರಣೆಯಾಗಿದೆ ಎನ್ನಲಾಗಿದೆ.