ಹೊಸದಿಂಗತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮಳೆ ಸದ್ದಿಲ್ಲದಂತಾಗಿದೆ. ಸದ್ಯ ಬೆಳಗಿನ ಜಾವ ದಟ್ಟ ಮಂಜು ಆವರಿಸಿದರೆ ನಂತರ ಬಿಸಿಲು ಹೊರಗೆ ಇದ್ದವರಿಗೆ ಚುರುಕ್ ಎನಿಸಲಿದೆ. ಜತೆಗೆ ರಾತ್ರಿಯಾದರೆ ಚಳಿಯ ವಾತಾವರಣವು ಮೈ ನಡುಗಿಸಲಿದೆ.
ಹೀಗೆ ಒಟ್ಟೊಟ್ಟಿಗೆ ಎಲ್ಲ ತರಹ ವಾತಾವರಣ ದಾಳಿ ಮಾಡುತ್ತಿದೆ. ರಾಜ್ಯದಲ್ಲಿಂದು ಒಣಹವೆ ಮುಂದುವರಿದಿದೆ. ಬೆಳಗ್ಗೆ ಇಬ್ಬನಿ ಬೀಳಲು ಆರಂಭವಾಗಿದ್ದು, ಮಳೆ ದೂರವಾದ ಲಕ್ಷಣ ಎದ್ದು ಕಾಣುತ್ತಿದೆ.
ಬಹುತೇಕ ಜಿಲ್ಲೆಗಳಲ್ಲಿ ಶುಷ್ಕ ವಾತಾವರಣವೇ ಮೇಲುಗೈ ಸಾಧಿಸಲಿದೆ. ದಕ್ಷಿಣ ಒಳನಾಡಿನಲ್ಲಿ ಮಳೆ ಮುನ್ಸೂಚನೆ ಇಲ್ಲದಿದ್ದರೂ ಮೋಡ ಕವಿದ ವಾತಾವರಣ ಇರಲಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ. ಮಲೆನಾಡಿನಲ್ಲೂ ಬೆಳಗ್ಗೆ-ರಾತ್ರಿ ಚಳಿ ಇದ್ದರೆ ಹಗಲಿನಲ್ಲಿ ಬಿಸಿಲು ಇರಲಿದೆ.
ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನದಲ್ಲಿ ಶುಷ್ಕ ವಾತಾವರಣ ಇರಲಿದೆ. ಇನ್ನು ಉತ್ತರ ಒಳನಾಡಿನಲ್ಲಿ ಮಳೆಯೇ ಇಲ್ಲದಂತಾಗಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ ಹಾಗೂ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಒಣಹವೆ ಇರಲಿದೆ.
ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ ಹಾಗೂ ಮಂಡ್ಯ, ಮೈಸೂರು, ರಾಮನಗರ, ತುಮಕೂರಲ್ಲಿ ಇಬ್ಬನಿಯೊಂದಿಗೆ ಶುಷ್ಕ ವಾತಾವರಣ ಇರಲಿದೆ.