ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾತಿ ತಾರತಮ್ಯ ವಿರೋಧಿ ಮಸೂದೆಯನ್ನು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯ ಸೆನೆಟ್‌ನಲ್ಲಿ ಅಂಗೀಕರಿಸಲಾಗಿದೆ. ಗುರುವಾರ ಸಚಿವ ಸಂಪುಟದಲ್ಲಿ ಮಂಡಿಸಿದ ಜಾತಿ ತಾರತಮ್ಯ ವಿರೋಧಿ ಮಸೂದೆಗೆ ಅನುಮೋದನೆ ಸಿಕ್ಕಿದೆ. ಸೆನೆಟ್‌ನಲ್ಲಿ ಒಟ್ಟು 40 ಸದಸ್ಯರಿದ್ದು, ಈ ಮಸೂದೆಯ 35 ಜನ ಮತ ಹಾಕಿದ್ದಾರೆ.
ಈ ಪೈಕಿ 34 ಮಂದಿ ಮಸೂದೆಯ ಪರವಾಗಿ ಮತ ಹಾಕಿದರೆ, ಒಬ್ಬರು ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಬಹುಪಾಲು ಸದಸ್ಯರು ಒಪ್ಪಿಗೆ ನೀಡಿದ ನಂತರ ಮಸೂದೆ ಅಂಗೀಕಾರಗೊಂಡಿದೆ ಎಂದು ಸ್ಪೀಕರ್ ಘೋಷಿಸಿದರು. ಮಸೂದೆಯನ್ನು ಶೀಘ್ರದಲ್ಲಿಯೇ ಜನಪ್ರತಿನಿಧಿಗಳ ಸಭೆಗೆ ಕಳುಹಿಸಲಾಗುವುದು, ಅಲ್ಲಿ ವಿಧೇಯಕ ಅಂಗೀಕಾರವಾದ ನಂತರ ಅದನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗುವುದು. ರಾಜ್ಯಪಾಲರು ಸಹಿ ಹಾಕಿದ ನಂತರ ಕಾನೂನಾಗಲಿದೆ ಎಂಬುದನ್ನು ತಿಳಿಸಿದರು.
ಕ್ಯಾಲಿಫೋರ್ನಿಯಾ ರಾಜ್ಯದಲ್ಲಿನ ಜಾತಿ ತಾರತಮ್ಯವನ್ನು ಬದಲಾಯಿಸುವ ಸಲುವಾಗಿ, ಡೆಮಾಕ್ರಟಿಕ್ ಪಕ್ಷದ ಶಾಸಕರು ಮತ್ತು ಸೆನೆಟರ್ ಐಶಾ ವಹಾಬ್ ಅವರು SB 403 ಮಸೂದೆಯನ್ನು ರಚಿಸಿದರು ಮತ್ತು ಈ ವರ್ಷದ ಏಪ್ರಿಲ್‌ನಲ್ಲಿ ಸೆನೆಟ್‌ನಲ್ಲಿ ಅದನ್ನು ಮಂಡಿಸಿದರು. ಜಾತಿ ಆಧಾರಿತ ತಾರತಮ್ಯ ಮತ್ತು ಹಿಂಸಾಚಾರವನ್ನು ಕಾನೂನುಬಾಹಿರಗೊಳಿಸಬೇಕು ಎಂದು ಒತ್ತಾಯಿಸಿದರು.
ವಿಧೇಯಕಕ್ಕೆ ಸೆನೆಟ್ ಅಂಗೀಕಾರ ದೊರೆತಿರುವುದಕ್ಕೆ ಆಯಿಷಾ ವಹಾಬ್ ಸಂತಸ ವ್ಯಕ್ತಪಡಿಸಿದ್ದಾರೆ. ಸೆನೆಟ್ ಅಂಗೀಕಾರದೊಂದಿಗೆ ವಿಶ್ವದ ಅತಿದೊಡ್ಡ ಟೆಕ್ ಕಂಪನಿಗಳ ತವರು ಕ್ಯಾಲಿಫೋರ್ನಿಯಾ ಜಾತಿ ತಾರತಮ್ಯವನ್ನು ನಿಷೇಧಿಸಿದ ಅಮೆರಿಕದ ಮೊದಲ ರಾಜ್ಯವಾಯಿತು. ಇತ್ತೀಚೆಗೆ, ಸಿಯಾಟಲ್ ಕೂಡ ಜಾತಿ ತಾರತಮ್ಯವನ್ನು ನಿಷೇಧಿಸಿದ ಮೊದಲ ನಗರವಾಗಿದೆ.