Monday, October 3, 2022

Latest Posts

ನೆದರ್ಲ್ಯಾಂಡ್ಸ್‌ ಗೆ ಭಾರತೀಯ ಮೂಲದ ಮಹಿಳೆಯನ್ನು ರಾಯಭಾರಿಯಾಗಿ ಘೋಷಿಸಿದ ಅಮೆರಿಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಮೆರಿಕವು ನೆದರ್ಲ್ಯಾಂಡ್ಸ್‌ ಗೆ ತನ್ನ ರಾಯಭಾರಿಯಾಗಿ ಭಾರತೀಯ ಮೂಲದ ಮಹಿಳೆ ಶೇಫಾಲಿ ದುಗ್ಗಲ್ ಅವರನ್ನು ನೇಮಕಗೊಳಿಸಿದೆ. ಶೆಫಾಲಿ ದುಗ್ಗಲ್ ಅವರು ಅಮೆರಿಕದಲ್ಲಿ ರಾಜಕೀಯ ಕಾರ್ಯಕರ್ತೆಯಾಗಿ ಹಾಗೂ ಮಹಿಳಾ ಹಕ್ಕುಗಳ ವಕೀಲೆಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

50 ವರ್ಷದ ಶೆಫಾಲಿ ರಾಜ್ಧಾನ್‌ ದುಗ್ಗಲ್ ಅವರು ಮೂಲತಃ ಹರಿದ್ವಾರದವರಾಗಿದ್ದು ಕಾಶ್ಮೀರಿ ಪಂಡಿತರ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರು ಜನಿಸಿದ್ದು ಭಾರತದಲ್ಲೇ ಆದರೂ ಎರಡು ವರ್ಷದವರಿರುವಾಗ ಅವರ ಕುಟುಂಬವು ಪೆನ್ಸಿಲ್ವೇನಿಯಾದ ಪಿಟ್ಸ್‌ಬರ್ಗ್‌ಗೆ ತೆರಳಿತು. ಅಲ್ಲಿಂದ ಅವರು ಅಮೆರಿಕ ನಿವಾಸಿಯಾಗಿದ್ದಾರೆ. ಅವರು ಮಿಯಾಮಿ ವಿಶ್ವವಿದ್ಯಾಲಯದಿಂದ ಪದವಿ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಅವರೊಬ್ಬ ಅನುಭವಿ ರಾಜಕೀಯ ಕಾರ್ಯಕರ್ತರಾಗಿದ್ದು ಮಹಿಳಾ ಮತ್ತು ಮಾನವ ಹಕ್ಕುಗಳ ಪ್ರತಿಪಾದಕರಾಗಿದ್ದಾರೆ.
ಅವರು ಯುನೈಟೆಡ್ ಸ್ಟೇಟ್ಸ್ ಹೋಲೋಕಾಸ್ಟ್ ಮೆಮೋರಿಯಲ್ ಮ್ಯೂಸಿಯಂ ಕೌನ್ಸಿಲ್‌ಗೆ ಅಮೆರಿಕದ ಅಧ್ಯಕ್ಷರಿಂದ ನೇಮಕಗೊಂಡಿದ್ದಾರೆ ಮತ್ತು ಪಾಶ್ಚಿಮಾತ್ಯ ಪ್ರಾದೇಶಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ಅಲ್ಲದೇ ಅವರು ಬಿಡೆನ್‌ ಆಡಳಿತದಲ್ಲಿ ಮಹಿಳೆಯರ ರಾಷ್ಟ್ರೀಯ ಸಹ-ಅಧ್ಯಕ್ಷರಾಗಿ ಮತ್ತು ಡೆಮಾಕ್ರಟಿಕ್ ರಾಷ್ಟ್ರೀಯ ಸಮಿತಿಯಲ್ಲಿ ಡೆಪ್ಯೂಟಿ ನ್ಯಾಷನಲ್ ಫೈನಾನ್ಸ್ ಚೇರ್‌ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಅವರನ್ನು ನೆದರ್ಲ್ಯಾಂಡ್ಸ್‌ ರಾಯಭಾರಿಯಾಗಿ ಬಿಡೆನ್‌ ಸರ್ಕಾರ ನಿಯೋಜಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!