ಹೊಸದಿಂಗತ ಡಿಜಿಟಲ್ ಡೆಸ್ಕ್:
ಕೆಲ ದಿನಗಳ ಹಿಂದೆ ಅಲಾಸ್ಕ ವಿಮಾನಯಾನ ಸಂಸ್ಥೆಯ ಬೋಯಿಂಗ್ ವಿಮಾನದ ಬಾಗಿಲು ಹಾರಾಡುತ್ತಿರುವಾಗಲೇ ಕಳಚಿ ಬಿದ್ದ ಪ್ರಕರಣವು ಭಾರಿ ಸುದ್ದಿಯಾದ ಬೆನ್ನಲ್ಲೇ ಅಮೆರಿಕದಲ್ಲಿ ಬೋಯಿಂಗ್ 737-9 ಮ್ಯಾಕ್ಸ್ ಸರಣಿಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
ಅಲಾಸ್ಕ ವಿಮಾನ ದುರಂತ ಪ್ರಕರಣದ ಬಳಿಕ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗಿದ್ದು, ಕೆಲ ಬೋಯಿಂಗ್ ವಿಮಾನಗಳ ಬಿಡಿ ಭಾಗಗಳಲ್ಲಿ ದೋಷ ಕಂಡುಬಂದಿದೆ. ಹಾಗಾಗಿ, ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಬೋಯಿಂಗ್ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಅಲಾಸ್ಕ ವಿಮಾನ ಪ್ರಕರಣದ ಕುರಿತು ಅಲಾಸ್ಕ ವಿಮಾನಯಾನ ಸಂಸ್ಥೆಯ ಸಿಇಒ ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣದ ಹೊಣೆಯನ್ನು ನಾವೇ ಹೊರುತ್ತೇವೆ ಹಾಗೂ ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ಆದರೂ, ದೇಶದ ಹಲವು ವಿಮಾನಯಾನ ಸಂಸ್ಥೆಗಳ 171 ಬೋಯಿಂಗ್ 737-9 ಮ್ಯಾಕ್ಸ್ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಎಫ್‌ಎಎ ಸ್ಥಗಿತಗೊಳಸಿದೆ.
ದೇಶದೊಳಗೆ ಬೋಯಿಂಗ್ 737-9 ಮ್ಯಾಕ್ಸ್ ವಿಮಾನಗಳು ಹಾರಾಟ ನಡೆಸುವಂತಿಲ್ಲ ಎಂದು ಆದೇಶಿಸಿದೆ. ಅಲಾಸ್ಕ ದುರಂತದ ಬಳಿಕ ನೂರಾರು ಪ್ರಯಾಣಿಕರು ಬೋಯಿಂಗ್ ವಿಮಾನಗಳ ಟಿಕೆಟ್ ಕ್ಯಾನ್ಸಲ್ ಮಾಡಿದ್ದು ಹಾಗೂ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.