ಭಾರತ ಸಹಿತ ಜಿ4 ಸದಸ್ಯ ದೇಶಗಳಿಗೆ ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯತ್ವ ನೀಡಲು ಅಮೆರಿಕಾ ಬೆಂಬಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಸೇರಿದಂತೆ ಜಿ4 ಸದಸ್ಯ ದೇಶಗಳಿಗೆ ಖಾಯಂ ಸದಸ್ಯತ್ವ ದೊರಕಿಸಿಕೊಡುವುದಕ್ಕೆ ಅಮೆರಿಕಾ ಬೆಂಬಲಿಸಿದೆ.
ಭಾರತವು ಸ್ಥಾನ ಪಡೆಯಲು ಅರ್ಹವಾಗಿದೆ ಎಂದು ಅಮೆರಿಕಾ ಹೇಳಿದೆ .

70 ವರ್ಷಗಳ ಹಿಂದಿನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಂಯೋಜನೆಯು ಪ್ರಸ್ತುತ ಜಾಗತಿಕ ವಾಸ್ತವಗಳನ್ನು ನಿಖರವಾಗಿ ಪ್ರತಿನಿಧಿಸುವುದಿಲ್ಲ ಎಂಬ ಭಾರತದ ಸಮರ್ಥನೆಯನ್ನು ವಿಶ್ವಸಂಸ್ಥೆಯಲ್ಲಿನ ಅಮೆರಿಕಾ ರಾಯಭಾರಿ ಲಿಂಡಾ ಥಾಮಸ್-ಗ್ರೀನ್‌ಫೀಲ್ಡ್ ಅವರು ಟೋಕಿಯೊದಲ್ಲಿ ತಮ್ಮ ಪ್ರಸ್ತುತ ಪ್ರವಾಸದಲ್ಲಿ ಭಾಷಣ ಮಾಡುವಾಗ ಬೆಂಬಲಿಸಿದರು.
ರಷ್ಯಾ ಮತ್ತು ಚೀನಾ ಮಾತ್ರ ಭದ್ರತಾ ಮಂಡಳಿಯ ವಿಸ್ತರಣೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಹೊಂದಿವೆ ಎಂದು ಅವರು ಹೇಳಿದರು.

ಈ ಹಿಂದೆ ಅಮೆರಿಕಾ, ಚೀನಾ ಮತ್ತು ರಷ್ಯಾ ಭದ್ರತಾ ಮಂಡಳಿಯಲ್ಲಿ ಬದಲಾವಣೆ ಮಾಡಲು ನಿರಾಕರಿಸಿದ್ದವು. ಆದರೆ 2021 ರಲ್ಲಿ, ಅಮೆರಿಕಾ ಅದರಿಂದ ಹೊರಬಂದಿತು. ‘ನಾವು ಭದ್ರತಾ ಮಂಡಳಿಯಲ್ಲಿ ಸುಧಾರಣೆ ತರಲು ಬಯಸುವುದಾಗಿ ಸ್ಪಷ್ಟಪಡಿಸಿತ್ತು’ ಎಂದು ಲಿಂಡಾ ಥಾಮಸ್​ ಹೇಳಿದರು.

ವಿಶ್ವಸಂಸ್ಥೆಯ ಈಗಿನ ಭದ್ರತಾ ಮಂಡಳಿಯು ಇಂದಿನ ನೈಜತೆಯನ್ನು ಪ್ರತಿಬಿಂಬಿಸುವುದಿಲ್ಲ, ಅಲ್ಲಿ ನಾವು 193 (ಸದಸ್ಯ ರಾಷ್ಟ್ರಗಳು) ಇದ್ದು, ಆಫ್ರಿಕಾ, ಲ್ಯಾಟಿನ್ ಅಮೇರಿಕಾ ಶಾಶ್ವತ ಸ್ಥಾನವನ್ನು ಹೊಂದಿಲ್ಲ ಮತ್ತು ಪ್ರಪಂಚದಾದ್ಯಂತದ ಇತರ ದೇಶಗಳು ಮತ್ತು ಕೌನ್ಸಿಲ್‌ನಲ್ಲಿ ಇತರ ಪ್ರದೇಶಗಳನ್ನು ಗಮನಾರ್ಹ ರೀತಿಯಲ್ಲಿ ಪ್ರತಿನಿಧಿಸಲಾಗಿಲ್ಲ. ಆದ್ದರಿಂದ ನಾವು ಜಿ4 ಸದಸ್ಯ ದೇಶಗಳಾದ ಜಪಾನ್, ಜರ್ಮನಿ, ಭಾರತ ಮತ್ತು ಬ್ರೆಜಿಲ್ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳಾಗುವುದಕ್ಕೆ ನಾವು ಬೆಂಬಲಿಸುತ್ತೇವೆ ಎಂದು ಅವರು ಹೇಳಿದರು.

ಕಳೆದ ತಿಂಗಳು, ಭಾರತವು ಜಿ4 ರಾಷ್ಟ್ರಗಳ ಪರವಾಗಿ ಭದ್ರತಾ ಮಂಡಳಿಯ ಸುಧಾರಣೆಗಾಗಿ ಒಂದು ವಿವರವಾದ ಮಾದರಿಯನ್ನು ಪ್ರಸ್ತುತಪಡಿಸಿತು. ಅದು ಜನರಲ್ ಅಸೆಂಬ್ಲಿಯಿಂದ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಹೊಸ ಖಾಯಂ ಸದಸ್ಯರನ್ನು ಒಳಗೊಂಡಿರುತ್ತದೆ. ವೀಟೋ ವಿಷಯದ ಮೇಲೆ ಅದು ಬದಲಾವಣೆ ಸೂಚಿಸುತ್ತದೆ.

ವಿಶ್ವಸಂಸ್ಥೆಯ ರಾಯಭಾರಿಯಾಗಿರುವ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು ಬ್ರೆಜಿಲ್, ಜರ್ಮನಿ, ಜಪಾನ್ ಮತ್ತು ಭಾರತದ ಪರವಾಗಿ ‘ಜಿ-4 ಮಾದರಿ’ಯನ್ನು ಚರ್ಚೆ, ಸಂವಾದ ಮತ್ತು ಅಂತಿಮವಾಗಿ ಸಂಧಾನಕ್ಕಾಗಿ ಪ್ರಸ್ತುತಪಡಿಸಿದರು. ಪ್ರಸ್ತಾವನೆ ಅಮೆರಿಕಾ ಮತ್ತು ಅದರ ಮಿತ್ರ ರಾಷ್ಟ್ರಗಳಿಂದ ಬಲವಾದ ಬೆಂಬಲವನ್ನು ಪಡೆದುಕೊಂಡಿರುವುದು ಗಮನಾರ್ಹ ಸಂಗತಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!