ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್‌ನ ಏಕೈಕ ನಾಗರಿಕ ಪರಮಾಣು ವಿದ್ಯುತ್ ಸ್ಥಾವರವಿರುವ ಬುಶೆಹರ್ ಪ್ರಾಂತ್ಯದ ಆವರಣದ ಮೇಲೆ ಅಮೆರಿಕದ ಪಡೆಗಳು ಭೀಕರ ಕ್ಷಿಪಣಿ ದಾಳಿ ನಡೆಸಿವೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಈ ದಾಳಿಯು ಪಶ್ಚಿಮ ಏಷ್ಯಾದಲ್ಲಿ ಈಗಾಗಲೇ ಜಾರಿಯಲ್ಲಿದ್ದ ತಾತ್ಕಾಲಿಕ ಕದನ ವಿರಾಮ ಒಪ್ಪಂದವನ್ನು ಸಂಪೂರ್ಣವಾಗಿ ಹಳಿ ತಪ್ಪಿಸಿದೆ.
ಬುಶೆಹರ್ ಪ್ರಾಂತ್ಯದ ರಾಜಕೀಯ ಮತ್ತು ಭದ್ರತಾ ವ್ಯವಹಾರಗಳ ಉಪ ರಾಜ್ಯಪಾಲರಾದ ಎಹ್ಸಾನ್ ಜಹಾನಿಯನ್ ಅವರು ಅಧಿಕೃತ ಇರಾನ್ ಸುದ್ದಿ ಸಂಸ್ಥೆ ‘ಇರ್ನಾ’ ಜತೆ ಮಾತನಾಡಿ, “ಅಮೆರಿಕದ ಶತ್ರು ಪಡೆಗಳು ಇಂದು ಮಧ್ಯಾಹ್ನ ಬುಶೆಹರ್ ಪರಮಾಣು ಸ್ಥಾವರದ ಸುತ್ತಮುತ್ತಲಿನ ಆವರಣ, ಚೊಗಢಕ್ ಸೇನಾ ನೆಲೆ ಮತ್ತು ಮೀನುಗಾರಿಕಾ ಬಂದರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ” ಎಂದು ಖಚಿತಪಡಿಸಿದ್ದಾರೆ.
ಇದನ್ನೂ ಓದಿ:
ಸದ್ಯಕ್ಕೆ ಪ್ರಾಣಾಪಾಯವಿಲ್ಲ
ಸದ್ಯಕ್ಕೆ ಈ ದಾಳಿಯಿಂದ ಇರಾನ್‌ನ ಪರಮಾಣು ಸ್ಥಾವರದ ಮುಖ್ಯ ರಿಯಾಕ್ಟರ್‌ಗೆ ಯಾವುದೇ ಹಾನಿಯಾಗಿಲ್ಲ ಮತ್ತು ವಿಕಿರಣ ಸೋರಿಕೆಯಾದವರದಿಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕದ ಕ್ಷಿಪಣಿಗಳ ಕೆಲವು ತುಣುಕುಗಳು ಸ್ಥಾವರದ ಆವರಣದೊಳಗೆ ಬಿದ್ದಿದ್ದು, ದಟ್ಟವಾದ ಹೊಗೆ ಆವರಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ದಾಳಿಯಲ್ಲಿ ಇರಾನ್ ಕಡೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಜಹಾನಿಯನ್ ಸ್ಪಷ್ಟಪಡಿಸಿದ್ದಾರೆ.



