ತೆರೆದ ವಾಹನದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಅಮಿತ್‌ ಶಾ ಮತಬೇಟೆ

ಹೊಸದಿಗಂತ ವರದಿ ಮಡಿಕೇರಿ:

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಮಡಿಕೇರಿಯಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಕೊಡಗಿನ ಬಿಜೆಪಿ ಅಭ್ಯರ್ಥಿಗಳಾದ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಪರವಾಗಿ ಮತ ಯಾಚಿಸಿದರು.

ನಗರದ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತೆರೆದ ವಾಹನದಲ್ಲಿ ಇಬ್ಬರು ಅಭ್ಯರ್ಥಿಗಳೊಂದಿಗೆ ಮಹದೇವಪೇಟೆ,‌ ಇಂದಿರಾಗಾಂಧಿ ವೃತ್ತ ಮೂಲಕ ಸ್ಕ್ವಾಡ್ರನ್ ಲೀಡರ್ ಎ.ಬಿ.ದೇವಯ್ಯ ವೃತ್ತದವರೆಗೆ ಮೆರವಣಿಗೆಯಲ್ಲಿ ಆಗಮಿಸಿದ ಅಮಿತ್ ಶಾ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.

ತೆರೆದ ವಾಹನದಲ್ಲಿ ಅಭ್ಯರ್ಥಿಗಳಾದ ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಪ್ರತಾಪ್ ಸಿಂಹ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಸಹಸ್ರಾರು ಕಾರ್ಯಕರ್ತರ ಘೋಷಣೆ, ಚೆಂಡೆ ಮೇಳದ ಸಹಿತ ಮೆರವಣಿಗೆಯಲ್ಲಿ ಸಾಗಿದ ಅಮಿತ್ ಶಾ ಅವರಿಗೆ ರಸ್ತೆಯ ಇಕ್ಕೆಲಗಳಲ್ಲಿದ್ದ ಮನೆ, ಮಳಿಗೆ ಮಾಲೀಕರು ಪುಷ್ಪ ಮಳೆಗೆರೆಯುವ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ಶಾ ಅವರು ಮತ್ತೆ ಉಡುಪಿಗೆ ತೆರಳಬೇಕಿದ್ದರಿಂದ, ಜನರಲ್ ತಿಮ್ಮಯ್ಯ ವೃತ್ತದ ವರೆಗೆ ಸಾಗಬೇಕಿದ್ದ ಮೆರವಣಿಗೆಯನ್ನು ಅಜ್ಜಮಾಡ ದೇವಯ್ಯ ವೃತ್ತ(ಹಳೆಯ ಖಾಸಗಿ ಬಸ್ ನಿಲ್ದಾಣ)ದಲ್ಲೇ ಮುಕ್ತಾಯಗೊಳಿಸಿದರು.

ಪೊಲೀಸರು, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಐಟಿಬಿಪಿ ಸೇರಿದಂತೆ ಸುಮಾರು 600ಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳು ರಕ್ಷಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!