ಪ್ರಮುಖ ನಿರ್ಧಾರಗಳು ಸುಭದ್ರ ಸರ್ಕಾರದಿಂದ ಮಾತ್ರ ಸಾಧ್ಯ: ಎಸ್.ಪಿ. ಮುದ್ದಹನುಮೇಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ಪ್ರಮುಖ ನಿರ್ಧಾರಗಳು ಸುಭದ್ರ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಹೇಳಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ವಿಚಾರದಲ್ಲಿ ಯಾವುದೇ ಸರ್ಕಾರ ಹಿಂದೆ ಮುಂದೆ ಯೋಚಿಸುತ್ತದೆ. ಆದರೆ ಪ್ರಮುಖ ನಿರ್ಧಾರಗಳು ಸುಭದ್ರ ಸರ್ಕಾರದಿಂದ ಮಾತ್ರ ಸಾಧ್ಯ. ಬಿಜೆಪಿ ಸರ್ಕಾರ ಮೀಸಲಾತಿ ವಿಷಯದಲ್ಲಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿಗೆ ಶೇ.15ರಿಂದ 17ಕ್ಕೆ, ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ 7ಕ್ಕೆ ಹೆಚ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಒಳಮೀಸಲಾತಿ ವಿಷಯದಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಬಂದ ನಂತರವೂ ಈ ಬಗ್ಗೆ ಚರ್ಚೆಯಾಗಿರಲಿಲ್ಲ. ಒಳಮೀಸಲಾತಿಗೆ ಹೋರಾಟಗಳು ನಡೆಯುತ್ತಲೇ ಇದ್ದವು. ಇತರ ಹಿಂದುಳಿದ ವರ್ಗ ಕೋಟಾದಲ್ಲಿ ಹೊಸ 2-ಸಿ, 2-ಡಿ ಪ್ರವರ್ಗ ಸೃಷ್ಟಿ ಮಾಡಿ ಶೇಕಡ 4ರಷ್ಟು ಮೀಸಲಾತಿ ಹೆಚ್ಚಿಸಲಾಗಿದೆ. 2-ಸಿಯಡಿ ಒಕ್ಕಲಿಗರಿಗೆ ಶೇ. 2, ಲಿಂಗಾಯತರಿಗೆ ಶೇ.7ರಷ್ಟು ಹೆಚ್ಚಿಸಲಾಗಿದೆ. ಬಿಜೆಪಿ ಸರ್ಕಾರ ಹೆಚ್ಚಿಸಿದ ಮೀಸಲಾತಿ ಒಟ್ಟಾರೆ ಸ್ವೀಕೃತವಾಗಿದೆ ಎಂದರು.

ಬಿಜೆಪಿ ಸರ್ಕಾರ ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಿರುವುದಲ್ಲದೆ, ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪಿಸಿ 500 ಕೋಟಿ ರೂ. ಒದಗಿಸಿದೆ. ಅಲ್ಲದೆ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿದೆ ಎಂದು ಅವರು ಹೇಳಿದರು. ಡಬಲ್ ಇಂಜಿನ್ ಸರ್ಕಾರದ ಸಾಧನೆ ಮತ್ತು ಅಭಿವೃದ್ಧಿಯನ್ನು ಮುಂದಿಟ್ಟು ಬಿಜೆಪಿ ಜನರ ಮುಂದೆ ಹೋಗುತ್ತಿದೆ ಎಂದು ಮುದ್ದಹನುಮೇಗೌಡ ಹೇಳಿದರು.

ವಿಧಾನಪರಿಷತ್ ಸದಸ್ಯೆ ಹಾಗೂ ಬಿಜೆಪಿ ರಾಜ್ಯ ವಕ್ತಾರರಾದ ಡಾ. ತೇಜಸ್ವಿನಿಗೌಡ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಲಿಂಗಾಯತರು ಮತ್ತು ಒಕ್ಕಲಿಗರಿಗೆ ನೀಡಿರುವ ಮೀಸಲಾತಿಯನ್ನು ರದ್ದುಗೊಳಿಸುವುದಾಗಿ ಹೇಳಿದ್ದಾರೆ. ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ರದ್ದು ಆದೇಶ ತೆಗೆದುಹಾಕಿ, ಅವರಿಗೆ ಆ ಮೀಸಲಾತಿ ನೀಡಲಾಗುವುದು ಎಂದರು.

ಆದರೆ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ಊರ್ಜಿತವಲ್ಲ. ಆಂಧ್ರದಲ್ಲೂ ಮುಸ್ಲಿಮರಿಗೆ ಮೀಸಲಾತಿ ನೀಡಲಾಗಿತ್ತು. ಆದರೆ ಈ ವಿಷಯ ಸುಪ್ರೀಂಕೋರ್ಟ್‍ನಲ್ಲಿದೆ. ಅಸ್ಪೃಶ್ಯತೆ, ಬಡತನ, ಅನಕ್ಷರತೆ ನಿರ್ಮೂಲನೆಯಾಗುವವರೆಗೆ ಮೀಸಲಾತಿ ನೀಡಬೇಕಾಗುತ್ತದೆ. ಅದರಂತೆ ಬಿಜೆಪಿ ಸರ್ಕಾರ ಒಳಮೀಸಲಾತಿಯನ್ನೂ ಒದಗಿಸುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಾಂದ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!