ಗೆಲುವಿಗೆ ರಣತಂತ್ರ ರೂಪಿಸಿದ ಬಿಜೆಪಿ: ಮುಂದಿನ ಗುರಿ ತೆಲಂಗಾಣ, ಪಶ್ಚಿಮ ಬಂಗಾಳ ಎಂದ ಅಮಿತ್ ಶಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಂಪೂರ್ಣ ಭಾರತದಲ್ಲಿ ಬಿಜೆಪಿ ಆವರಿಸುತ್ತಿದೆ. ಜನಪರ ಆಡಳಿತ, ಅಭಿವೃದ್ಧಿಗಾಗಿ ಜನರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಹೀಗಾಗಿ ಮುಂದಿನ 30 ರಿಂದ 40 ವರ್ಷ ಬಿಜೆಪಿ ಯುಗ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಹೈದರಾಬಾದ್‌ನ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜಕೀಯ ನಿರ್ಣಯಗಳನ್ನು ಮಂಡಿಸಿದರು.
2014ರಿಂದ ನರೇಂದ್ರ ಮೋದಿ ಆಡಳಿತ ದೇಶದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಹೊಸ ಬದಲಾವೆಗೆ ನಾಂದಿ ಹಾಡಿದೆ. ತೆಲಂಗಾಣದ ಕುಟುಂಬ ರಾಜಕೀಯ ಅಂತ್ಯಗೊಳಿಸಲು ಬಿಜೆಪಿ ಶಕ್ತವಾಗಿದೆ. ಇತರ ರಾಜ್ಯಗಳು ಹಾಗೂ ಕೇಂದ್ರದ ಆಡಳಿತ ಗಮನಿಸಿರುವ ತೆಲಂಗಾಣ ಜನತೆ ಇದೀಗ ಬಿಜೆಪಿಯತ್ತ ಒಲವು ತೋರಿದ್ದಾರೆ. ತೆಲಂಗಾಣ ಮಾತ್ರವಲ್ಲ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡು, ಒಡಿಶಾದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ಪುದುಚೇರಿಯಲ್ಲಿ ನಡೆಯಲಿರುವ ಚುನಾವಣೆಗಳು ಮತ್ತು ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆಯೂ ನಿರ್ಣಯಗಳನ್ನು ಮಂಡಿಸಲಾಯಿತು.
ಸಂಸದರಿಗೆ ಟಾಸ್ಕ್
ದೇಶಾದ್ಯಂತ ಇರುವ ಬಿಜೆಪಿ ಸಂಸದರು ತಮ್ಮ-ತಮ್ಮ ಕ್ಷೇತ್ರಗಳಿಗೆ ಹೋಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಸಭೆಯಲ್ಲಿ ಸಲಹೆ ನೀಡಿದ್ದಾರೆ. ಈ ಕಾರ್ಯಕಾರಿಣಿ ನಂತರ ಸಂಸದರು ಮೂರು ದಿನಗಳ ಕಾಲ ತಮ್ಮ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಪಕ್ಷವನ್ನು ಬಲಪಡಿಸಲು ಶ್ರಮಿಸುವಂತೆ ಸೂಚಿಸಲಾಗಿದೆ. ಅದರಲ್ಲೂ ಪ್ರಮುಖವಾಗಿ 200 ಸಂಸದೀಯ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಈ ಕ್ಷೇತ್ರಗಳ ಹೊಣೆಯನ್ನು ಕೇಂದ್ರ ಸಚಿವರಿಗೆ ವಹಿಸಲಾಗಿದೆ.
ಜನಸಾಮಾನ್ಯರ ಜೊತೆ ಸಂಪರ್ಕ ಇಡಬೇಕು
ನಡ್ಡಾ ಅವರು ಪಕ್ಷ ಬಲವರ್ಧನೆಗೂ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಇದೇ ವೇಳೆ ಮುಖಂಡರು ಹಾಗೂ ಕಾರ್ಯಕರ್ತರಿಗೆ ತಾಕೀತು ಮಾಡಿದರು. ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಪಡೆದ 30 ಕೋಟಿ ಫಲಾನುಭವಿಗಳ ಜೊತೆ ಬಿಜೆಪಿ ನಾಯಕರು ಸಂವಾದ ನಡೆಸಬೇಕು. ದೇಶದ ಪ್ರತಿ ಬೂತ್‌ನಲ್ಲೂ 200 ಸಕ್ರಿಯ ಬಿಜೆಪಿ ಕಾರ್ಯಕರ್ತರು ಇರುವಂತೆ ನೋಡಿಕೊಳ್ಳಬೇಕು. ಬೂತ್‌ ಮಟ್ಟದ ಪ್ರಮುಖರು ಕಾರ್ಯಕರ್ತರ ಜೊತೆ ಸಂವಾದ ನಡೆಸಿ, ಕಾರ್ಯಕರ್ತರು ಜನರ ಜೊತೆ ಸಂಪರ್ಕದಲ್ಲಿರುವಂತೆ ಮಾಡಬೇಕು. ಜನಸಾಮಾನ್ಯರ ಜೊತೆ ಸಂಪರ್ಕದಲ್ಲಿರಲು ಸ್ಥಳೀಯ ಮಟ್ಟದಲ್ಲಿ ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ರಚಿಸಬೇಕು ಎಂದು ಹೇಳಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!