ಹೊಸದಿಗಂತ ವರದಿ, ಮಡಿಕೇರಿ:
ಕೇಸರಿ ಶಾಲು ಹಾಕುವ ವಿಚಾರದಲ್ಲಿ ಕಾಲೇಜಿನ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆಯುವುದರೊಂದಿಗೆ ಒಬ್ಬರಿಗೆ ಚಾಕು ಇರಿದ ಪ್ರಕರಣ ಕುಶಾಲನಗರದಲ್ಲಿ ನಡೆದಿದೆ.
ಕುಶಾಲನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿ ಸಂದೀಪ ಚಾಕು ಇರಿತಕ್ಕೊಳಗಾದ ವಿದ್ಯಾರ್ಥಿಯಾಗಿದ್ದು, ಪರಸ್ಪರ ಹೊಡೆದಾಟದಲ್ಲಿ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ಧನುಷ್ ಗಾಯಗೊಂಡಿದ್ದಾರೆ. ಇಬ್ಬರೂ ಕುಶಾಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂದೀಪ ಎಂಬವರು ತನ್ನ ಸ್ನೇಹಿತೆಗೆ ಒತ್ತಾಯಪೂರ್ವಕವಾಗಿ ಕೇಸರಿ ಶಾಲು ಹಾಕಲು ಬಂದಾಗ ಧನುಷ್ ಹಾಗೂ ವಿಕ್ಕು ಎಂಬವರು ವಿರೋಧ ವ್ಯಕ್ತಪಡಿಸಿದರೆನ್ನಲಾಗಿದ್ದು, ಈ ವಿಚಾರವಾಗಿ ಪರಸ್ಪರ ಹೊಡೆದಾಟವಾಗಿದೆ.ಈ ಸಂದರ್ಭ ವಿಕ್ಕು ಚಾಕುವಿನಿಂದ ಇರಿದಿದ್ದು, ಸಂದೀಪ್ ಗಾಯಗೊಂಡಿದ್ದಾರೆ.
ನನ್ನ ಮೇಲೆ ಸಂದೀಪ ಹಾಗೂ ಅವರ ಸ್ನೇಹಿತರು ಹಲ್ಲೆ ನಡೆಸಿದ ಕಾರಣ ಚಾಕು ಹಾಕಿದೆ ಎಂದು ವಿಕ್ಕು ಆರೋಪಿಸಿದ್ದಾರೆ. ಹೊಡೆದಾಟದಲ್ಲಿ ವಿಕ್ಕು ತಲೆ ಹಾಗೂ ಕೈ ಭಾಗಕ್ಕೂ ಪೆಟ್ಟು ಬಿದ್ದಿದ್ದು, ಪುನೀತ್ ಕುಮಾರ್ ಎಂಬವರೂ ಗಾಯಗೊಂಡಿರುವುದಾಗಿ ಹೇಳಲಾಗಿದೆ. ಮತ್ತೊಂದೆಡೆ ಘಟನೆಗೆ ಪ್ರೇಮ ಪ್ರಕರಣವೂ ಕಾರಣ ಎನ್ನಲಾಗಿದ್ದು, ಘಟನೆ ಬಗ್ಗೆ ಕುಶಾಲನಗರ ಪಟ್ಟಣ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ