ಹೊಸದಿಗಂತ ವರದಿ ಬಳ್ಳಾರಿ:
ಅಮೃತ್ ಭಾರತ್ ರೈಲು ನಿಲ್ದಾಣ ಅಭಿವೃದ್ಧಿ ಯೋಜನೆಯಡಿಲ್ಲಿ ಕೇಂದ್ರ ಸರಕಾರ ದೇಶಾದ್ಯಂತ 508 ರೈಲು ನಿಲ್ದಾಣಗಳನ್ನು ಮರು ಅಭಿವೃದ್ಧಿಗೊಳಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಏಕಕಾಲದಲ್ಲಿ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ನಗರದ ಪಾರಂಪರಿಕ ಕಟ್ಟಡವಾದ ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಬಳ್ಳಾರಿ ರೈಲ್ವೆ ನಿಲ್ದಾಣಕ್ಕೂ ಚಾಲನೆ ದೊರೆಯಿತು. ಭಾನುವಾರ ವೇದಿಕೆ ಕಾರ್ಯಕ್ರಮದಲ್ಲಿ ಸಂಸದ ದೇವೇಂದ್ರಪ್ಪ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರಿಂದ ಚಾಲನೆ ಸಿಕ್ಕಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ದೇವೇಂದ್ರಪ್ಪ, ಬಳ್ಳಾರಿ ರೈಲ್ವೆ ನಿಲ್ದಾಣ, ರೈಲ್ವೆ ಸಂಪರ್ಕ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುವ ಪ್ರಯತ್ನ ಮಾಡುವೆ ಎಂದರು. ಈ ರೈಲು ನಿಲ್ದಾಣ 17 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುವುದು ಎಂದರು. ಸುಧಾ ಕ್ರಾಸ್ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಟೆಂಡರ್ ಹಂತದಲ್ಲಿ ಇದೆ ಆದಷ್ಟು ಬೇಗ ಫ್ಲೈ ಓವರ್ ನಿರ್ಮಾಣ ಮಾಡುವುದಾಗಿ ತಿಳಿಸಿದರು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಮಾತನಾಡಿ, ಬಳ್ಳಾರಿ ರೈಲ್ವೆ ನಿಲ್ದಾಣಕ್ಕೆ 150 ವರ್ಷಗಳ ಇತಿಹಾಸ ಇದೆ. ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟಗಾರರನ್ನು ಹುರಿದುಂಬಿಸುವ ಸಲುವಾಗಿ ರೈಲ್ವೆ ನಿಲ್ದಾಣದಲ್ಲಿ ಸುಮಾರು 8 ಗಂಟೆಗಳ ಕಾಲ ವಾಸ್ತವ್ಯ ಹೂಡಿದ್ದರು. ಇಂತಹ ರೈಲು ನಿಲ್ದಾಣ ಅಭಿವೃದ್ಧಿ ಮಾಡಬೇಕಾಗಿದೆ ಎಂದರು.
ರೈಲ್ವೆ ಜೋನ್ ಅಭಿವೃದ್ಧಿ ಪಡಿಸಲು ಅನುಮತಿ ಬೇಕಾಗುತ್ತದೆ, ಅನುಮತಿ ಬೇಗ ಬಂದರೆ ರಾಜ್ಯ ಸರ್ಕಾರದಿಂದ ಜೋನ್ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು. ಇದಕ್ಕೆ ರಾಜ್ಯ ಸರ್ಕಾರದಿಂದ ಬೇಕಾದ ಸೌಲಭ್ಯ ನೀಡುತ್ತೇವೆ ಎಂದರು.
ಚೀಫ್ ಪ್ರಾಜೆಕ್ಟ್ ಮ್ಯಾನೇಜರ್ ಜಿ.ಆರ್.ಎಸ್ ರಾವ್ ಅವರು ಮಾತನಾಡಿ, ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಸುಮಾರು 17 ಕೋಟಿ ವೆಚ್ಚದಲ್ಲಿ ಬಳ್ಳಾರಿ ನಗರದಲ್ಲಿನ ರೈಲ್ವೆ ನಿಲ್ದಾಣದ ಕಟ್ಟಡವನ್ನು ಒಳಾಂಗಣ ಮತ್ತು ಹೊರಗಡೆ ಕಟ್ಟಡವನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ತಿಳಿಸಿದರು.