ಅಮೃತಯಾತ್ರೆ: ʼಅತಿಥಿದೇವೋಭವʼದ ಮೂಲಕ ಆರ್ಥಿಕ ಬೆಳವಣಿಗೆಯ ಕಡೆಗೆ ಸಾಗಿದ ಕಥೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ʼಸೋನೇ ಕಿ ಚಿಡಿಯಾʼ ಎಂದೆನಿಕೊಂಡಿರುವ ಭಾರತವು ಪ್ರಾಚೀನ ಕಾಲದಿಂದಲೂ ಜಗತ್ತಿನ ಇತರೆಡೆಗಳಿಂದ ಜನರನ್ನು ತನ್ನತ್ತ ಆಕರ್ಷಿಸಿಕೊಳ್ಳುತ್ತಲೇ ಬಂದಿದೆ. ಅದಕ್ಕೇ ಅಲ್ಲವೇ ವ್ಯಾಪಾರಿಗಳ ಸೋಗಿನಲ್ಲಿ ಬಂದವರು ಎರಡು ಶತಮಾನಗಳ ಕಾಲ ನಮ್ಮಲ್ಲೇ ನೆಲೆನಿಂತಿದ್ದು. ಇಲ್ಲಿನ ಪ್ರಾಕೃತಿಕ ಸೌಂದರ್ಯವೇ ಅಂಥಹದ್ದು. ಅದಕ್ಕಾಗಿಯೇ ಅಮೀರ್‌ ಖುಸ್ರೋ ಭಾರತದ ಕಾಶ್ಮೀರವನ್ನು ಕಂಡು ʼಗರ್‌ ಫಿರ್ದೌಸ್‌ ರುವೇ ಜಮೀನಸ್ತ್‌, ಹಮೀನಸ್ತೋ.. (ಜಗತ್ತಿನಲ್ಲಿ ಸ್ವರ್ಗೆವೆಂಬುದಿದ್ದರೆ ಅದು ಇಲ್ಲೇ ಇದೆ) ಎಂದಿದ್ದು. ಹಿಮಾಲಯ, ಮರುಭೂಮಿ, ಕಡಲು, ಸರೋವರ, ಬೆಟ್ಟಗುಡ್ಡಗಳು, ನದಿ ಜಲಪಾತ, ಹೀಗೆ ಜಗತ್ತಿನ ಎಲ್ಲಾ ಬಗೆಯ ಪ್ರಾಕೃತಿಕ ಸೌಂದರ್ಯವೂ ಭಾರತದಲ್ಲಿದೆ. ಈ ಸೌಂದರ್ಯವನ್ನರಸಿ ಜಗತ್ತಿನೆಲ್ಲೆಡೆಯಿಂದ ಅನೇಕರು ಭಾರತಕ್ಕೆ ಬರುತ್ತಾರೆ. ಬಂದವರಿಗೆಲ್ಲ ʼಅತಿಥಿದೇವೋ ಭವʼ ಎಂದು ಬರಮಾಡಿಕೊಳ್ಳುವ ಸಂಸ್ಕೃತಿ ಭಾರತದ ಮಣ್ಣಿನದು.

ಪ್ರಸ್ತುತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರೋ ಸಮಯದಲ್ಲಿ ಪ್ರವಾಸೋದ್ಯಮವು ಬೆಳವಣಿಗೆಯಾಗಿ ದೇಶದ ಆರ್ಥಿಕತೆಗೆ ಕೊಡುಗೆ ನೀಡಿದುದರ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು. ಭಾರತದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಎಲ್ಲಿಲ್ಲದ ಬೇಡಿಕೆಯಿದೆ. ವರ್ಷಪೂರ್ತಿ ಲಕ್ಷಾಂತರ ಪ್ರವಾಸಿಗರು ಭಾರತಕ್ಕೆ ಬರುತ್ತಾರೆ. ಅದರಲ್ಲೂ ವಿಶೇಷವಾಗಿ ವೈದ್ಯಕೀಯ ಮತ್ತು ಸ್ವಾಸ್ಥ್ಯ ಪ್ರವಾಸಿಗರ ಪಾಲಿಗೆ ಭಾರತ ನೆಚ್ಚಿನ ತಾಣ. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತಿದೆ. ಅದೊಂದು ಲಾಭದಾಯಕ ಉದ್ಯಮವಾಗಿ ಬೆಳೆದು ದೇಶದ ಆರ್ಥಿಕಬೆಳವಣಿಗೆಗೆ ಕೊಡುಗೆ ನೀಡುತ್ತಿದೆ. ಪ್ರವಾಸಿಗರ ಸಂಖ್ಯೆಯಲ್ಲಿಯೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. 1981ರಲ್ಲಿ 1.28 ಮಿಲಿಯನ್‌ ವಿದೇಶೀ ಪ್ರವಾಸಿಗರು ಭಾರತಕ್ಕೆ ಬಂದಿದ್ದರು ಈ ಸಂಖ್ಯೆ ಹತ್ತುಪಟ್ಟು ಹೆಚ್ಚಾಗಿದೆ 2019ರಲ್ಲಿ 10.93 ಮಿಲಿಯನ್‌ ವಿದೇಶೀ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದಾರೆ. ಭಾರತದ ಪ್ರವಾಸೋದ್ಯಮವು ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಪರಿವರ್ತನೆಯಾಗುತ್ತಿದೆ. ಪ್ರವಾಸೋದ್ಯಮ ಮತ್ತು ಆತಿಥ್ಯವಲಯಗಳು ಭಾರತದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಕ್ಷೇತ್ರಗಳಲ್ಲಿ ಒಂದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!