ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿರೋ ಹೊತ್ತಲ್ಲಿ ಉದ್ಯೋಗಕ್ಕಾಗಿ ವಿದೇಶಗಳಿಗೆ ಹಾರಿಹೋಗುತ್ತಿದ್ದ ಮನಃಸ್ಥಿತಿಗಳನ್ನು ಬದಲಾಯಿಸಿ ಉದ್ಯಮಶೀಲತೆಯನ್ನು ಬೆಳೆಸಿ ಹೊಸ ತಲೆಮಾರಿನ ಉದ್ದಿಮೆಗಳ ಹುಟ್ಟಿಗೆ ಕಾರಣವಾದದ್ದೂ ಕೂಡ ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಸಾಧನೆಗಳಲ್ಲೊಂದು.
ಹೊರಗಿನಿಂದ ಬಹುತೇಕ ತಂತ್ರಜ್ಞಾನಗಳನ್ನು, ಅಗತ್ಯ ವಸ್ತುಗಳನ್ನು ರಫ್ತುಮಾಡಿಕೊಳ್ಳುತ್ತಿದ್ದ ಭಾರತದ ಪರಾವಲಂಬನೆಯನ್ನು ಕಡಿಮೆ ಮಾಡಿ, ಮೇಕ್ ಇನ್ ಇಂಡಿಯಾದಂತಹ ಯೋಜನೆಗಳ ಮೂಲಕ ದೇಶೀಯ ಉತ್ಪಾದನೆಗೆ ಬೆಂಬಲ ಕೊಟ್ಟಿದ್ದಲ್ಲದೇ ಅತ್ಮನಿರ್ಭರ ಭಾರತದ ಪರಿಕಲ್ಪನೆಯ ಮೂಲಕ ದೇಶವನ್ನು ಜಗತ್ತಿನ ಉತ್ಪಾದನಾ ಕೇಂದ್ರವಾಗಿಸುವ ಕನಸು ಕಟ್ಟಿಕೊಟ್ಟು ಆ ಮೂಲಕ ಯುವ ಉದ್ದಿಮೆದಾರರಿಗೆ ಅವಕಾಶದ ಬಾಗಿಲು ತೆಗೆದು ಹೊಸ ಹೊಸ ಉದ್ದಿಮೆಗಳ ಹುಟ್ಟಿಗೆ ಕಾರಣವಾಗಿದ್ದರಲ್ಲಿ ಮೋದಿ ಸರ್ಕಾರದ ಶ್ರಮ ಬಹಳಷ್ಟಿದೆ. ಏಕೆಂದರೆ ಇಲ್ಲಿದ್ದರೇ ಏನೂ ಗೀಟೊಲ್ಲ ಅನ್ನೋ ಮನೋಭಾವದಲ್ಲಿದ್ದ ಯುವಕರನ್ನು ಸ್ಟಾರ್ಟಪ್ ಇಂಡಿಯಾದ ಮೂಲಕ ಇಲ್ಲಿಯೇ ಉಳಿಯುವಂತೆ ಮಾಡಿದ್ದಲ್ಲದೇ, ದೇಶೀಯ ಪ್ರತಿಭೆಗಳನ್ನು ಬೆಳೆಸುವ ಕೆಲಸವೂ ಆಗಿದೆ. ಇಂದು ನವೋದ್ದಿಮೆಗಳಾಗಿ ಹುಟ್ಟಿದ ಅದೆಷ್ಟೋ ಕಂಪನಿಗಳು ಹೆಮ್ಮರವಾಗಿ ಬೆಳೆಯುತ್ತಿವೆ. 2016ರಲ್ಲಿ ಸ್ಟಾರ್ಟಪ್ ಇಂಡಿಯಾ ಜಾರಿಯಾದಾಗ 452 ನವೋದ್ದಿಮೆಗಳು ಹುಟ್ಟಿದ್ದವು. ಅಲ್ಲಿಂದ ಪ್ರತೀ ವರ್ಷ ಈ ಸಂಖ್ಯೆ ಏರಿಕೆಯೇ ಆಗುತ್ತಿದೆ. ಪ್ರಸ್ತುತ ದೇಶದಲ್ಲಿ 84 ಸಾವಿರಕ್ಕೂ ಅಧಿಕ ಸ್ಟಾರ್ಟಪ್ ಗಳು ಹುಟ್ಟಿಕೊಂಡಿವೆ. ಪ್ರತಿ ದಿನ ಹೊಸ ಹೊಸ ಉದ್ದಿಮೆಗಳು ಹುಟ್ಟಿಕೊಳ್ಳುತ್ತಲೇ ಇವೆ. ಕೆಲವೇ ವರ್ಷಗಳಲ್ಲಿ ಇವುಗಳೆಲ್ಲ ಯುನಿಕಾರ್ನ್ (1ಬಿಲಿಯನ್ ಡಾಲರ್ ಮೌಲ್ಯ ಹೊಂದಿದ ಕಂಪನಿ) ಗಳಾಗಿ ಬದಲಾಗುತ್ತಿವೆ. ಇಲ್ಲಿಯವರೆಗೆ 100ಕ್ಕೂ ಅಧಿಕ ಯುನಿಕಾರ್ನ್ ಗಳು ಹುಟ್ಟಿವೆ. ಉದ್ಯಮಶೀಲತೆಯ ಮೂಲಕ ನವಭಾರತದ ನಿರ್ಮಾಣ ಸಾಕಾರವಾಗುತ್ತಿದೆ.