July 28, 2026
Tuesday, July 28, 2026
spot_img

ಅಮ್ಟಾಡಿಯ ಬೆನೆಡಿಕ್ಟ್ ಕಾರ್ಲೋ ಕೊ*ಲೆ ಪ್ರಕರಣ: ಮೂರು ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟ

ಹೊಸದಿಗಂತ ಡೆಸ್ಕ್:

ಐದು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ, ಪಾಂಡೀಲು ಎಂಬಲ್ಲಿ ನಡೆದಿದ್ದ ವೃದ್ಧೆ ಬೆನೆಡಿಕ್ಟ್ ಕಾರ್ಲೋ (೭೩) ಕೊಲೆ, ಚಿನ್ನಾಭರಣ ಲೂಟಿಗೈದ ಪ್ರಕರಣದ ಮೂವರು ಆರೋಪಿಗಳಿಗೆ ದ.ಕ. ಜಿಲ್ಲಾ 2 ನೇ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅಮ್ಟಾಡಿ ಗ್ರಾಮದ ಏರ್ಯ ನಿವಾಸಿ ದಿ. ಪಾಸ್ಕಲ್ ಬರೆಟ್ಟೋ ಅವರ ಪುತ್ರಿ ಕು. ಏಲ್ಮಾ ಪ್ರೆಶ್ಚಿತ್ ಬರೆಟ್ಟೋ ( 23), ಮಂಗಳೂರು ಉರ್ವ ಹೊಯಿಗೆ ಬೈಲಿನ ನಿವಾಸಿ, ಪ್ರಸ್ತುತ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಕೇದಿಗೆಯಲ್ಲಿ ವಾಸವಿರುವ ಕಿಶೋರ್ ಕುಮಾರ್ ಅವರ ಪುತ್ರ ಚರಣ್ ಕುಮಾರ್ (28) ಹಾಗೂ ನರಿಕೊಂಬುಗ್ರಾಮದ ಅಂತರ ನಿವಾಸಿ ರಾಮಚಂದ್ರ ನಾಯಕ್ ಅವರ ಪುತ್ರ ಸತೀಶ ಎ.ಆರ್ (31) ಜೀವಾವಧಿ ಶಿಕ್ಷೆಗೊಳಗಾದವರಾಗಿದ್ದಾರೆ.

ಏನಿದು ಘಟನೆ?

ಕು. ಏಲ್ಮಾ ಪ್ರೆಶ್ಚಿತ್ ಬರೆಟ್ಟೋ, ಅಮ್ಟಾಡಿ ನಿವಾಸಿ ಬೆನೆಡಿಕ್ಟ್ ಕಾರ್ಲೋ ಎಂಬ ವೃದ್ದೆಯ ಆರೈಕೆ ನೋಡಿಕೊಳ್ಳುತ್ತಿದ್ದಳು. ಈ ಸಂದರ್ಭ ಕಾರ್ಲೋರವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ, ಮನೆಯಲ್ಲಿದ್ದ ಇತರ ಚಿನ್ನಾಭರಣಗಳನ್ನು ಗಮನಿಸಿ ಇದನ್ನು ಸುಲಿಗೆ ಮಾಡಲು ಸಂಚು ರೂಪಿಸಿದ್ದಳು. ಇದಕ್ಕಾಗಿ ತನ್ನ ಸ್ನೇಹಿತ ಸತೀಶ ನಾಯಕ್‌ ನನ್ನು ಸಂಪರ್ಕಿಸಿ ಕೊಲೆಗೆ ಸಹಕರಿಸುವ ನಿಟ್ಟಿನಲ್ಲಿ ವಿಷ ಪದಾರ್ಥ ಒದಗಿಸುವಂತೆ ತಿಳಿಸಿದ್ದು, ಅದರಂತೆ ಈತ ಪಾಣೆಮಂಗಳೂರು ಅಂಗಡಿಯೊಂದರಿಂದ ವಿಷ ಪದಾರ್ಥ ಖರೀದಿಸಿ ಒದಗಿಸಿಕೊಟ್ಟಿದ್ದ. ಬಳಿಕ ಈ ವಿಷವನ್ನು ಆಹಾರದಲ್ಲಿ ಬೆರಸಿ ಬೆನಡಿಕ್ಟರವರಿಗೆ ನೀಡಿದ್ದರು. ಆದರೆ ಬೆನಡಿಕ್ಟ್ ಮಾತ್ರ ಸತ್ತಿರಲಿಲ್ಲ, ಬಳಿಕ ಕು. ಏಲ್ಮಾ ಪ್ರೆಶ್ಚಿತ್ ಬರೆಟ್ಟೋಳ ಸೂಚನೆಯಂತೆ ಆರೋಪಿ ಸತೀಶ ನಾಯಕ್‌, ಗೆಳೆಯನಾದ ಆರೋಪಿ ಚರಣ್‌ ಕುಮಾರ್‌ ನನ್ನು ಸಂಪರ್ಕಿಸಿ ಸುಲಿಗೆ ಚಿನ್ನಾಭರಣದಲ್ಲಿ ಪಾಲು ನೀಡುವುದಾಗಿ ಒಪ್ಪಿಸಲಾಗಿತ್ತು.

ಅದರಂತೆ 2021 ರ ಜ. 25 ರಂದು ರಾತ್ರಿ ಕು. ಏಲ್ಮಾ ಪ್ರೆಶ್ಚಿತ್ ಬರೆಟ್ಟೋ, ಚರಣ್ ಕುಮಾರ್ ಬೆನಡಿಕ್ಟ್ ಕಾರ್ಲೋರವರನ್ನು ತಲೆದಿಂಬು, ಬಟ್ಟೆಯಿಂದ ಬಾಯಿ ಹಾಗು ಮೂಗನ್ನು ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆಗೈದು ಬಳಿಕ ಚಿನ್ನದ ಕರಿಮಣಿ ಸರ, ಮನೆಯಲ್ಲಿದ್ದ ಆಭರಣ ಸೇರಿದಂತೆ ಒಟ್ಟು 61.070 ಗ್ರಾಂ ತೂಕದ ಅಂದಿನ ದರ ಸುಮಾರು 3 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು.

ಇದನ್ನೂ ಓದಿ:

ಈ ಘಟನೆಯ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಯು.ಡಿ.ಆರ್‌ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪಿ.ಎಸ್.‌ ಐ. ಪ್ರಸನ್ನ ಎಂ.ಎಸ್.‌, ಈ ಕೃತ್ಯದ ಬಗ್ಗೆ ಅನುಮಾನಗೊಂಡು ತನಿಖೆ ಚುರುಕುಗೊಳಿಸಿದಾಗ ಬೆನೆಡಿಕ್ಟ್ ಕಾರ್ಲೋ ಅವರದ್ದು ವ್ಯವಸ್ಥಿತ ಕೊಲೆ ಕೃತ್ಯ ಎಂಬುದು ಗೊತ್ತಾಗಿತ್ತು. ಆರೋಪಿಗಳಾದ ಕು.ಏಲ್ಮಾ ಪ್ರೆಶ್ಚಿತ್ ಬರೆಟ್ಟೋ,ಸತೀಶ್ ನಾಯಕ್, ಚರಣ್ ಕುಮಾರ್ ಎಂಬವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಚಿನ್ನಾಭರಣ ಸುಲಿಗೆಗಾಗಿ ಮಾಡಿರುವ ಕೃತ್ಯ ಎಂಬುದು ಬಯಲಿಗೆ ತರುವಲ್ಲಿ ಅವರು ಯಶಸ್ವಿಯಾಗಿದ್ದರು. ಆಗ ಬಂಟ್ವಾಳ ಪೊಲೀಸ್‌ ವೃತ್ತ ನಿರೀಕ್ಷಕರಾದ ಟಿ. ಡಿ. ನಾಗರಾಜ್‌ ರವರು ತನಿಖೆ ಪೂರ್ತಿಗೊಳಿಸಿ ಈ ಮೂವರು ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಇದೀಗ ಈ ಪ್ರಕರಣದ ವಿಚಾರಣೆ ನಡೆಸಿದ ದ.ಕ.ಜಿಲ್ಲಾ 2 ನೇ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್‌ ವಿ.ಎನ್. ರವರು ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಜ್ಯೋತಿ ಪ್ರಮೋದ್‌ ನಾಯಕ್‌ ವಾದಿಸಿದ್ದರು. ತನಿಖಾ ಸಹಾಯಕರಾಗಿ ಬಂಟ್ಚಾಳ ಗ್ರಾಮಾಂತರ ಠಾಣೆಯ ಎಎಸ್ ಐ ಗಿರೀಶ್‌ ಮತ್ತು ಕೋರ್ಟು ಪಿ.ಸಿ ಸಂತೋಷ್‌ ಸಹಕರಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !