ಅರಬ್ಬರ ನಾಡಿನಲ್ಲಿ ಪತ್ತೆಯಾಗಿದೆ 8000 ವರ್ಷ ಹಳೆಯ ದೇಗುಲ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬರೋಬ್ಬರಿ 8000 ವರ್ಷಗಳಷ್ಟು ಪುರಾತನ ದೇವಾಲಯವೊಂದು ಸೌದಿ ಅರೇಬಿಯಾದ ಆಲ್‌ಫಾವ್ ಎಂಬ ಪ್ರದೇಶದಲ್ಲಿ ಪತ್ತೆಯಾಗಿದೆ. ಇದನ್ನು ಸೌದಿ ಹೆರಿಟೇಜ್ ಕಮಿಷನ್‌ನ ಪುರಾತತ್ತ್ವಶಾಸ್ತ್ರಜ್ಞರ ತಂಡ ಪತ್ತೆಹಚ್ಚಿದ್ದು, ಎಲ್ಲರ ಅಚ್ಚರಿಗೆ ಇದು ಕಾರಣವಾಗಿದೆ. ಅಲ್ಲದೇ, ಈ ದೇವಾಲಯವನ್ನು ವಿವಿಧ ಅತ್ಯಾಧುನಿಕ ತಂತ್ರಜ್ಞಾನ ವನ್ನು ಬಳಸಿ ಪತ್ತೆಹಚ್ಚಲಾಗಿದೆ.

ಪತ್ತೆಯಾದ ದೇವಾಲಯ ಹೊಸ ತಂತ್ರಜ್ಞಾನಗಳ ನೆರವಿನಿಂದ ಸುಮಾರು 8000 ವರ್ಷಗಳಷ್ಟು ಹಳೆಯದ್ದು ಎಂದು ತಿಳಿದುಬಂದಿದೆ. ಇದು ನವಶಿಲಾಯುಗದ ಮಾನವ ವಸಾಹತುಗಳ ಅನ್ವೇಷಣೆಗೆ ಸಾಕಷ್ಟು ನೆರವು ನೀಡಲಿದೆ. ಅಲ್‌ಫಾವ್‌ನ ದೇವತೆ ಕಹಾಲನನ್ನು ಇಲ್ಲಿ ಆರಾಧನೆ ಮಾಡಲಾಗುತ್ತಿತ್ತು ಎನ್ನಲಾಗುತ್ತಿದೆ.

ಈ ದೇಗುಲದ ನಿರ್ಮಾಣ, ಸ್ಮಾರಕ ಕಟ್ಟಡಗಳು, ಮೂಲೆ ಗೋಪುರಗಳು, ವಿಶಾಲ ಪ್ರಾಂಗಣ, ಕಾಲುವೆಗಳು, ನೀರಿನ ತೊಟ್ಟಿ , ನೂರಾರು ಹೊಂಡ ಕುರುಹು ಪತ್ತೆಯಾಗಿದ್ದು, ಈ ಕುರುಗಳಿಂದ ಆ ಕಾಲದಲ್ಲಿಯೇ ಯೋಜಿತ ನಗರವೊಂದು ಅಸ್ತಿತ್ವದಲ್ಲಿತ್ತು. ಅಲ್ಲದೆ, ವಿಗ್ರಹ ಆರಾಧನೆ ಪದ್ಧತಿಯೂ ರೂಢಿಯಲ್ಲಿತ್ತು ಎಂಬುದನ್ನು ಪುಷ್ಟೀಕರಿಸಲು ಸಾಕಷ್ಟು ಪುರಾವೆಗಳು ದೊರೆತಿರುವುದಾಗಿ ಪುರಾತತ್ತ್ವ ಶಾಸ್ತ್ರಜ್ಞರು ಹೇಳಿದ್ದಾರೆ.

ಸೌದಿ ಅರೇಬಿಯಾದ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಪುರಾತತ್ತ್ವಶಾಸ್ತ್ರಜ್ಞರ ತಂಡವು ನಡೆಸಿದ ಈ ಉತ್ಖನನದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡಿದೆ. ಟೋಪೊಗ್ರಾಫಿಕ್ ಸರ್ವೆ, ರಿಮೋಟ್ ಸೆನ್ಸಿಂಗ್, ಭೂಮಿಯೊಳಗಿನ ಮಾಹಿತಿ ಬಹಿರಂಗಪಡಿಸುವ ರಾಡರ್, ಲೇಸರ್ ಸ್ಕ್ಯಾನಿಂಗ್ ಇತ್ಯಾದಿ ತಂತ್ರಜ್ಞಾನಗಳನ್ನು ಬಳಸಿ ಈ ಪುರಾತನ ದೇವಾಲಯವನ್ನು ಪತ್ತೆಹಚ್ಚಲಾಗಿದೆ.
ಕಲ್ಲಿನ ದೇವಾಲಯದ ಅವಶೇಷಗಳು, ಬಲಿಪೀಠದ ಭಾಗಗಳು, ವಿವಿಧ ಕೈಂಕರ್ಯಗಳು ನಡೆಯುವ ಸ್ಥಳಗಳು, ಪೂಜೆ, ಆಚರಣೆಗಳು ನಡೆಯುವ ಸ್ಥಳಗಳು ಪತ್ತೆಯಾಗಿವೆ. ಅಲ್‌ಫಾವ್ ಸ್ಥಳೀಯರ ಜೀವನವು ಪುರಾತನ ಕಾಲದಲ್ಲಿ ಹೇಗಿತ್ತು ಎನ್ನುವುದು ಈ ಕುರುಹುಗಳಿಂದ ತಿಳಿದುಬರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!