ಹೊಸದಿಗಂತ ವರದಿ, ಶಿವಮೊಗ್ಗ:
ಪಕ್ಷದ ಒಳಗಿನ ಎಲ್ಲ ಗೊಂದಲಗಳಿಗೂ ಸದ್ಯದಲ್ಲೇ ಉತ್ತರ ಸಿಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಶಯ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್‌ವಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶೇ.80ರಷ್ಟು ಪ್ರಮುಖರು ರಾಜ್ಯಾಧ್ಯಕ್ಷರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರನ್ನೇ ಮುಂದುವರಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ಪಕ್ಷದ ಐದಾರು ಮಂದಿ ಪ್ರಮುಖರು ನನ್ನ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಅಸಮಾಧಾನ ಇರುವುದು ಕೆಲವರಿಗೆ ಮಾತ್ರ. ಅದೂ ಕೂಡ ನನ್ನ ಬಗ್ಗೆ ಅಲ್ಲ. ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ನನಗೆ ನೀಡಿರುವ ಬಗ್ಗೆ. ಈ ಬೆಳವಣಿಗೆಗಳು ನನಗೂ ಬೇಸರ ಉಂಟು ಮಾಡಿವೆ. ನನ್ನ ಜವಾಬ್ದಾರಿ ನಿರ್ವಹಣೆ ಬಗ್ಗೆ ಕಾರ್ಯಕರ್ತರಿಗೆ ಸಮಾಧಾನ ವಿದೆ. ಆದರೆ ಪಕ್ಷದೊಳಗಿನ ಕಹಿ ಬೆಳವಣಿಗೆಗಳ ಬಗ್ಗೆ ಬೇಸರವಿದೆ ಎಂದರು.
ಕೆಲವರು ಯಡಿಯೂರಪ್ಪ ಅವರಿಗೆ ಅವಮಾನ ಆಗುವ ರೀತಿ ಮಾತನಾಡುತ್ತಿದ್ದಾರೆ. ಇದರಿಂದ ಕಾರ್ಯಕರ್ತರು ನೊಂದಿದ್ದಾರೆ. ಈ ವಿಚಾರವಾಗಿ ಹೈಕಮಾಂಡ್ ಜತೆ ಮಾತನಾಡಿದ್ದೇನೆ ಎಂದು ತಿಳಿಸಿದರು