ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ವಿಧಾನಸಭಾ ಚುನಾವಣೆಯ ಕಾವು ಮತಷ್ಟು ಏರಿಕೆಯಾಗುತ್ತಿದೆ. ಇಂದು ಪ್ರಚಾರಕ್ಕೆ ದುಮುಕ್ಕಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ತರಾಟೆಗೆ ತಗೆದುಕೊಂಡಿದ್ದಾರೆ.
2020ರಲ್ಲಿ ಪಿತೂರಿಯ ಭಾಗವಾಗಿ ದೆಹಲಿಯಲ್ಲಿ ಗಲಭೆಗಳನ್ನು ಆಯೋಜಿಸಲಾಗಿತ್ತು. ಈ ಪಿತೂರಿಯಲ್ಲಿ ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ಭಾಗಿಯಾಗಿದ್ದಾರೆ. ಆದ್ದರಿಂದ ಅಣ್ಣಾ ಹಜಾರೆಯವರಿಗೆ ದ್ರೋಹ ಮಾಡಿದ ವ್ಯಕ್ತಿ ಇಡೀ ದೇಶಕ್ಕೂ ದ್ರೋಹ ಬಗೆಯುತ್ತಿದ್ದಾನೆ ಎಂದು ಯೋಗಿ ಅವರು ಹೇಳಿದ್ದಾರೆ.
ದೆಹಲಿಯ ಎಎಪಿ ಸರ್ಕಾರದ ಪಾಪದ ಹೊರೆಯನ್ನು ಮಥುರಾದ ಜನರು ಅನುಭವಿಸಬೇಕಾಗಿದೆ. ಯಾಕೆಂದರೆ ಯಮುನಾ ನದಿಯನ್ನು ಸ್ವಚ್ಛಗೊಳಿಸಲು ಕೇಜ್ರಿವಾಲ್ ಮತ್ತು ಅವರ ಕಂಪನಿಯು ಎಂದಿಗೂ ಸಹಕರಿಸಲಿಲ್ಲ. ಯಾಕೆಂದರೆ ಕೇಜ್ರಿವಾಲ್ ಗೆ ಕೆಲಸ ಮಾಡಲು ಇಷ್ಟವಿಲ್ಲ. ಇದರೊಂದಿಗೆ ಅವರಿಗೇನಿದ್ದರು, ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಹೇಳುವುದೇ ಇವರ ಕೆಲಸವಾಗಿದ್ದು, ಕೇಜ್ರಿವಾಲ್ ಒಬ್ಬ ಸುಳ್ಳಿನ ಎಟಿಎಂ ಎಂದು ಟೀಕಿಸಿದ್ದಾರೆ.
ಮಹಾಕುಂಭ ಪ್ರಾರಂಭವಾದ ಜನವರಿ 13 ರಿಂದ ಇಲ್ಲಿಯವರೆಗೆ 10 ಕೋಟಿಗೂ ಅಧಿಕ ಜನರು ಪ್ರಯಾಗ್ರಾಜ್ಗೆ ಭೇಟಿ ನೀಡಿದ್ದಾರೆ. ಇದಕ್ಕಾಗಿ ಯುಪಿ ಸರ್ಕಾರ ರೈಲು, ರಸ್ತೆ ಮತ್ತು ವಿಮಾನದ ಮೂಲಕ ಅತ್ಯುತ್ತಮ ಸಂಪರ್ಕವನ್ನು ಸುಲಭಗೊಳಿಸಿದೆ. ಇದರಿಂದ ನಮಾಮಿ ಗಂಗೆ ಯೋಜನೆಯತ್ತ ಇಡೀ ವಿಶ್ವವೇ ಪ್ರಯಾಗ್‌ರಾಜ್‌ನತ್ತ ನೋಡುತ್ತಿದೆ ಎಂದರು. ಆದರೆ ಇದೇ ವೇಳೆ ಅವರು, ನನ್ನ ಇಡೀ ಸಚಿವ ಸಂಪುಟವೇ ಉತ್ತರ ಪ್ರದೇಶದ ತ್ರಿವೇಣಿ ಸಂಗಮದಲ್ಲಿ ಮುಳುಗಿದೆ. ಆದರೆ ದೆಹಲಿಯಲ್ಲಿನ ಯಮುನಾದಲ್ಲಿ ಇಲ್ಲಿನ ಮುಖ್ಯಮಂತ್ರಿಗಳು ತಮ್ಮ ಮಂತ್ರಿಗಳೊಂದಿಗೆ ಸ್ನಾನ ಮಾಡಬಹುದೇ? ಎಂದು ಪ್ರಶ್ನಿಸಿದ್ದಾರೆ.
ಕೈಗಾರಿಕಾ ನಿರ್ಲಕ್ಷ್ಯ ಮತ್ತು ಅತಿಕ್ರಮಣ ಸಮಸ್ಯೆಗಳು
ದೆಹಲಿಯ ಕೈಗಾರಿಕಾ ವಲಯಗಳನ್ನು ಉದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಸೌಲಭ್ಯಗಳ ಕೊರತೆಯಿಂದಾಗಿ ದೆಹಲಿಯ ಓಖ್ಲಾ ಕೈಗಾರಿಕಾ ಪ್ರದೇಶವು ಶಿಥಿಲಗೊಂಡಿದೆ. AAP ಕೈಗಾರಿಕಾ ಬೆಳವಣಿಗೆಗೆ ಅಡ್ಡಿಪಡಿಸಿದರೆ, ಅವರು ಅಕ್ರಮ ಬಾಂಗ್ಲಾದೇಶಿ ನುಸುಳುಕೋರರ ನೆಲೆಯನ್ನು ಸುಗಮಗೊಳಿಸಿದರು. ಇದಕ್ಕೆ ವಿರುದ್ಧವಾಗಿ, ಉತ್ತರ ಪ್ರದೇಶದ ನ್ಯೂ ಓಖ್ಲಾ ಪ್ರದೇಶ (ನೋಯ್ಡಾ) ಅಭಿವೃದ್ಧಿಗೆ ಒಂದು ಪ್ರಮುಖ ಉದಾಹರಣೆಯಾಗಿದೆ ಎಂದರು.
ಒಂದು ದಶಕದ ಹಿಂದೆ, ಇಡೀ ದೇಶದಿಂದ ಜನರು ಅನುಕೂಲಕ್ಕಾಗಿ ದೆಹಲಿಗೆ ಬರುತ್ತಿದ್ದರು. ಆದರೆ ಇಂದಿನ ಪರಿಸ್ಥಿತಿ ಹೇಗಿದೆ? ಎಂದು ಪ್ರಶ್ನಿಸಿದರು. ಇಂದು ದೆಹಲಿಯ ರಸ್ತೆ ಪೂರ್ತಿ ಗುಂಡಿಗಳೇ ತುಂಬಿಕೊಂಡಿವೆ. ಒಬ್ಬ ವ್ಯಕ್ತಿ ಮತ್ತು ಅವನ ತಂಡಕ್ಕೆ ದೆಹಲಿಯಲ್ಲಿ ಆಟವಾಡಲು ನಾವು ಏಕೆ ಅನುಮತಿ ನೀಡಬೇಕು ಎಂದರು.
ಎಎಪಿ ಸರ್ಕಾರದ ಅಸಮರ್ಥತೆ ಪ್ರತಿಯೊಂದು ವಲಯದಲ್ಲೂ ಎದ್ದುಕಾಣುತ್ತಿದೆ ಎಂದು ಪ್ರತಿಪಾದಿಸುವ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಚಾರಕ್ಕಿಂತ ಅಭಿವೃದ್ಧಿ ಮತ್ತು ಜನಕಲ್ಯಾಣಕ್ಕೆ ಒತ್ತು ನೀಡುವ ನಾಯಕತ್ವಕ್ಕೆ ಮಣೆ ಹಾಕುವುದಾಗಿ ಭರವಸೆ ನೀಡಿದರು.