ದೆಹಲಿ ಕೆಂಪುಕೋಟೆ ಸ್ವಾಧೀನಕ್ಕೆ ನೀಡುವಂತೆ ಮೊಘಲ್ ವಂಶಸ್ಥರಿಂದ ಹೈಕೋರ್ಟ್ ಗೆ ಅರ್ಜಿ!

ಹೊಸದಿಗಂತ ಡಿಜಿಟಲ್ ಡೆಸ್ಕ್

ದೆಹಲಿಯ ಕೆಂಪುಕೋಟೆ ತಮ್ಮ ಸ್ವಾಧೀನಕ್ಕೆ ನೀಡುವಂತೆ ಮೊಘಲ್ ಕೊನೆಯ ಸಾಮ್ರಾಟ್​ ಬಹದ್ದೂರ್ ಷಾ ಜಫರ್ ಅವರ ಉತ್ತರಾಧಿಕಾರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್​ ತಿರಸ್ಕರಿಸಿದೆ.

ಸುಲ್ತಾನಾ ಬೇಗಂ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ವಜಾಗೊಳಿಸಿದ ಬಳಿಕ ಪ್ರಸ್ತುತ ಅರ್ಜಿ ಸಲ್ಲಿಸಲು ಎರಡೂವರೆ ವರ್ಷ ವಿಳಂಬವಾಗಿರುವುದರಿಂದ ಕಾಲಮಿತಿಯ ಕಾರಣಕ್ಕೆ ನಿರ್ಬಂಧಿಸಲಾಗಿದೆ ಎಂದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ಹೇಳಿದೆ.

ವಿಳಂಬ ಮನ್ನಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಏಕಸದಸ್ಯ ಪೀಠದ ಆದೇಶ ಪ್ರಕಟವಾಗಿ 900 ದಿನಗಳ ಬಳಿಕ ಸಲ್ಲಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ತನ್ನ ಅನಾರೋಗ್ಯ ಮತ್ತು ಮಗಳ ನಿಧನದಿಂದಾಗಿ ವಿಳಂಬ ಉಂಟಾಯಿತು ಎಂಬ ಬೇಗಂ ಅವರ ಮನವಿಯನ್ನು ಪೀಠ ತಿರಸ್ಕರಿಸಿದೆ. ತಾನು ಬಹದ್ದೂರ್ ಷಾ ಜಫರ್ II ಅವರ ಮರಿ ಮೊಮ್ಮಗನ ವಿಧವೆ ಪತ್ನಿ ಎಂದು ಉಲ್ಲೇಖಿಸಿ ಬೇಗಂ ಅವರು 2021ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

1857ರಲ್ಲಿ ನಡೆದ ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ತನ್ನ ಕುಟುಂಬದ ಆಸ್ತಿಯನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವಂಚನೆಯಿಂದ ಸ್ವಾಧೀನಪಡಿಸಿಕೊಂಡಿತು. ಬಹದ್ದೂರ್ ಷಾ ಜಫರ್ ಅವರನ್ನು ಗಡಿಪಾರು ಮಾಡಿ ಕೆಂಪುಕೋಟೆಯನ್ನು ಮೊಘಲರಿಂದ ಕಸಿದುಕೊಳ್ಳಲಾಯಿತು. ಈಗ ಭಾರತ ಸರ್ಕಾರ ಕೂಡ ಅದೇ ಕುಕೃತ್ಯದಲ್ಲಿ ತೊಡಗಿದೆ. ಹೀಗಾಗಿ ಭಾರತ ಸರ್ಕಾರದಿಂದ ತನಗೆ ಆಸ್ತಿ ದೊರೆಯುವಂತೆ ಮಾಡಬೇಕು ಮತ್ತು ಪರಿಹಾರ ಒದಗಿಸಬೇಕು ಎಂದು ಬೇಗಂ ಕೋರಿದ್ದರು. ಆದರೆ ನ್ಯಾಯಾಲಯದ ಮೆಟ್ಟಿಲೇರಲು ಕುಟುಂಬ 164 ವರ್ಷಗಳಷ್ಟು ವಿಳಂಬ ಮಾಡಿದ್ದೇಕೆ ಎಂದು ಈ ಹಿಂದೆ ಪ್ರಶ್ನಿಸಿದ್ದ ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿತ್ತು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!