ಹೊಸದಿಗಂತ ವರದಿ ವಿಜಯಪುರ:
ಕರ್ತವ್ಯ ನಿರತ ಸಾರಿಗೆ ಬಸ್ ನಿರ್ವಾಹಕನ ಮೇಲೆ ಇಬ್ಬರು ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಕಲಹಳ್ಳಿ ಬಳಿ ನಡೆದಿದೆ.
ಈ ರಸ್ತೆಯಲ್ಲಿ ತೆರಳುತ್ತಿದ್ದ ಸಾರಿಗೆ ಬಸ್ ಅನ್ನು ತಡೆದ ಓರ್ವ ಯುವಕ ಹಾಗೂ ವ್ಯಕ್ತಿಯೊಬ್ಬ, ನಿರ್ವಾಹಕನ ಜೊತೆಗೆ ವಾಗ್ವಾದ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಮುಂದಾಗಿದ್ದಾರೆ. ಇದಕ್ಕೆ ನಿರ್ವಾಹಕ ಪ್ರತಿರೋಧ ವ್ಯಕ್ತಪಡಿಸುತ್ತಿದಂತೆ, ಯುವಕ ಹಾಗೂ ನಿರ್ವಾಹಕನ ಮಧ್ಯೆ ಮಾರಾಮಾರಿ ನಡೆದಿದೆ.
ಇದರಿಂದ ತೀವ್ರ ಆಕ್ರೋಶಗೊಂಡ ಯುವಕ ಹಾಗೂ ವ್ಯಕ್ತಿ ಇಬ್ಬರು ಸೇರಿ ನಿರ್ವಾಹಕನ ಮೇಲೆ ಮತ್ತೊಮ್ಮೆ ಹಲ್ಲೆ ನಡೆಸಿ, ಕುತ್ತಿಗೆ ಹಿಸುಕಿದ ಪರಿಣಾಮ ನಿರ್ವಾಹಕ ಅರೆ ಪ್ರಜ್ಞಾಹೀನವಾಗಿ ಬಿದಿದ್ದಾನೆ. ಬಳಿಕ ಬಸ್ ನಲ್ಲಿದ್ದ ಪ್ರಯಾಣಿಕರು ನಿರ್ವಾಹಕನನ್ನು ಆರೈಕೆ ಮಾಡಿದ್ದಾರೆ.
ಅಮಾನವೀಯ ಹಲ್ಲೆಗೆ ಒಳಗಾದ ನಿರ್ವಾಹಕನನ್ನು ಮಲ್ಲಪ್ಪ ಲಮಾಣಿ ಎಂದು ಗುರುತಿಸಲಾಗಿದ್ದು, ರಮೇಶ ಎಂಬವನು ಸೇರಿದಂತೆ ಇನ್ನೊಬ್ಬನಿಂದ ಈ ದುಷ್ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ. ಹಲ್ಲೆಗೊಳಗಾದ ನಿರ್ವಾಹಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:
ಶುಕ್ರವಾರ ಮದರಿ ಗ್ರಾಮದ ಬಸ್ ನಿಲ್ದಾಣದಲ್ಲಿ ನಿಂತಿದ್ದ ಆಟೋ ರೀಕ್ಷಾ (ಕೆಎ- 28, ಬಿ 4370) ಹಿಂದಕ್ಕೆ ತೆಗೆಯುವ ವಿಚಾರದಲ್ಲಿ ಆಟೋ ಡ್ರೈವರ್
ಹಾಗೂ (ಕೆಎ 37, ಎಫ್ 0609) ಸಾರಿಗೆ ಬಸ್ ನಿರ್ವಾಹಕನ ಜೊತೆ ಗಲಾಟೆ ಆಗಿತ್ತು. ಇದರಿಂದ ಇಂದು ಬಸ್ ಮದರಿ ಗ್ರಾಮದಿಂದ ಕನ್ನೊಳ್ಳಿ ಮಾರ್ಗವಾಗಿ ಸಿಂದಗಿ ಪಟ್ಟಣಕ್ಕೆ ಬರುವಾಗ ಬಸ್ ತಡೆದು ನಿರ್ವಾಹಕನ ಮೇಲೆ ಹಲ್ಲೆ ನಡೆಸಲಾಗಿದೆ. ಈ ಘಟನೆಯಿಂದ ಸಾರಿಗೆ ನೌಕರರಲ್ಲಿ ತೀವ್ರ ಆತಂಕ ಮೂಡಿದ್ದು, ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಘಟನೆ ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.



