ಶಾಲೆ ಬಿಟ್ಟ ಮಕ್ಕಳನ್ನು ವಾಪಸ್ ಕರೆತರುವ ಪ್ರಯತ್ನವಾಗಬೇಕು-ಶಾಸಕ ನಾರಾ ಭರತ್ ರೆಡ್ಡಿ

ಹೊಸದಿಗಂತ ವರದಿ ಬಳ್ಳಾರಿ: 

ನಾನಾ ಕಾರಣಗಳಿಂದ ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಗುರುತಿಸಿ ಅವರನ್ನು ಮತ್ತೆ ಶಾಲೆಗೆ ಕರೆತರುವ ಪ್ರಯತ್ನ ಆಗಬೇಕಿದೆ. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಿ, ಯಾವುದೇ ಕಾರಣಕ್ಕೂ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಿ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಸೂಚಿಸಿದರು.

ನಗರದ ಬಾಪೂಜಿನಗರ ಬಡಾವಣೆಯ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ, ಶುಕ್ರವಾರ 2023-24ನೇ ಸಾಲಿನ ರಾಜ್ಯ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 9 ಹಾಗೂ 10ನೇ ತರಗತಿ ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ರಕ್ತಹೀನತೆ ನಿವಾರಣೆಗಾಗಿ ಹಮ್ಮಿಕೊಂಡಿದ್ದ, ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮ ಅಡಿಯಲ್ಲಿ ಮೊಟ್ಟೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳ ಹಾಗೂ ಪಾಲಕರ ಬೇಡಿಕೆಯಂತೆ ಶಾಲೆಯಲ್ಲಿ ಪಿಯು ಕಾಲೇಜು ಸ್ಥಾಪನೆಗೆ ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಮಕ್ಕಳು ಇದೇ ಶಾಲೆಯಲ್ಲೇ ಕಾಲೇಜು ಶಿಕ್ಷಣ ಪಡೆದು ನಾನಾ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಪಾಲಕರ, ಕಲಿಸಿದ ಗುರುಗಳ ಕೀರ್ತಿ ಹೆಚ್ಚಿಸಬೇಕು ಎಂದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಉಪ ಮೇಯರ್ ಬಿ.ಜಾನಕಿ, ಕ್ಷೇತ್ರ ಶಿಕ್ಷಣಧಿಕಾರಿ ನಯಮೂರ್ ರಹೆಮಾನ್, ಬಿಸಿಯೂಟ ಯೋಜನೆಯ ಜಿಲ್ಲಾ ಅಧಿಕಾರಿ ಶೇಖರಪ್ಪ ಹೊರಪೇಟಿ, ಮಹಾನಗರ ಪಾಲಿಕೆ ಸದಸ್ಯ ರಾಮಾಂಜಿನೇಯ, ಮಾಜಿ ಸದಸ್ಯರಾದ ಶಿವರಾಜ್, ವೆಂಕಟೇಶ, ಪ್ರೌಢ ಶಾಲೆ ಮುಖ್ಯಗುರು ಚಾಗಪ್ಪ, ಪ್ರಾಥಮಿಕ ಶಾಲೆ ಮುಖ್ಯಗುರು ಗೀತಾ ಸೇರಿದಂತೆ ಇತರರಿದ್ದರು.

ಇದಕ್ಕೂ ಮುನ್ನ ಶಾಸಕ ಭರತ್ ರೆಡ್ಡಿ ಅವರೊಂದಿಗೆ ಮಕ್ಕಳು ಸೆಲ್ಫಿ ಕ್ಲಿಕ್ಕಿಸಿಕೊಂಡು ಗಮನಸೆಳೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!