-ಗಣೇಶ ಜೋಶಿ ಸಂಕೊಳ್ಳಿ
ಕುಮಟಾ: ತಲೆತಲಾಂತರದಿಂದ ಮನೆಗಳಲ್ಲಿ ಜನಿವಾರ ತಯಾರಿಸುತ್ತಿದ್ದ ಅದೆಷ್ಟೋ ಕುಟುಂಬಗಳು ತಮ್ಮ ಕಾಯಕ ಬಿಟ್ಟು, ವೇಗದ ಬದುಕಿಗೆ ಹೊಂದಿಕೊಂಡಿದೆ. ಯಜ್ಞೋಪವೀತ, ಉಪವೀತ, ಯಜ್ಞಸೂತ್ರ, ವ್ರತಬಂಧ, ಬಲಬಂಧ, ಮೊನೀಬಂಧ ಹಾಗೂ ಬ್ರಹ್ಮಸೂತ್ರ ಎಂಬ ಹಲವು ಹೆಸರುಗಳಿಂದ ಕರೆಯಲ್ಪಡುವ ಉಪವೀತ ಕನ್ನಡದಲ್ಲಿ ಜನಿವಾರವೆನಿಸಿಕೊಂಡಿದೆ. ಆ ದಿವ್ಯ ಬಂಧ ತಯಾರಿಯ ಹಿಂದಿನ ಕಾಯಕ ಅದೆಷ್ಟು ಕಠಿಣವಾಗಿದ್ದು ಎಂಬುದು ಇತ್ತೀಚಿನ ಜನರಿಗೆ ಕಲ್ಪನೆಗೂ ನಿಲುಕದ್ದು.
ಈ ಹಿಂದೆ ಜವಿವಾರ ತಯಾರಿಸಿಯೇ ಬದುಕು ಕಟ್ಟಿಕೊಂಡ ಅದೆಷ್ಟೋ ಕುಟುಂಬಗಳು ಕುಮಟಾ ತಾಲೂಕಿನಲ್ಲಿವೆ. ‘ಯಜ್ಞೋಪವೀತಂ ಪರಮಂ ಪವಿತ್ರಂ’ ಎಂಬುದಾಗಿ ಅದನ್ನು ಧಾರಣೆ ಮಾಡುವವರು ಮನೆಯಲ್ಲಿಯೇ ತಯಾರಿಸಿದ ಯಜ್ಞೋಪವೀತವನ್ನು ಮಾತ್ರವೇ ಬಳಸುತ್ತಿದ್ದ ಕಾಲವೂ ಇದೀಗ ಮಾಯವಾಗುವ ಕಾಲ ಕಣ್ಣಮುಂದಿದೆ.
ಯಜ್ಞೋಪವೀತ ತಯಾರಿ: ತಾಲೂಕಿನ ಹಿರಿಯ ವೈದಿಕರೊಬ್ಬರು ಹೇಳುವಂತೆ ತಾಲೂಕಿನಲ್ಲಿ ಕಳೆದ 50 ವರ್ಷಗಳ ಹಿಂದೆ ಒಟ್ಟು 36 ಕುಟುಂಬಗಳಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಯಜ್ಞೋಪವೀತ ತಯಾರಿಸಲಾಗುತ್ತಿತ್ತು. ಉಪವೀತಕ್ಕೆ ಬೇಕಾದ ಹತ್ತಿ ತಂದು ಶುಭ್ರವಸನರಾಗಿ ಅದನ್ನು ದಾರವಾಗಿಸಿ, ಮೂರು ದಾರಗಳಿಂದ ಒಂದು ದಾರವನ್ನು ತಯಾರಿಸಿ, ಅಂತಹ ಮೂರು ದಾರಗಳನ್ನು ಸಮ ಅಳತೆಗೆ ಹೊಂದಿಸಿ ಯಜ್ಞೋಪವೀತ ತಯಾರಿ ಮಾಡಲಾಗುತ್ತಿತ್ತು.
ಜನಿವಾರದ ಭಟ್ಟರು: ಜನಿವಾರದ ಭಟ್ಟರೆಂದೇ ಕರೆಯುವ ಹಲವರು, ಮನೆ ಮನೆಗೆ ಹೋಗಿ ಜನಿವಾರ ಕೊಟ್ಟು ಬರುತ್ತಿದ್ದ ಕಾಲವೂ ಇತ್ತಂತೆ. ಆದರೆ ಕಾಲ ಕಳೆಯುತ್ತ, ಜನಿವಾರ ತಯಾರಿಸುವ ಕುಟುಂಬಗಳು ಆ ಕಾಯಕದಿಂದ ವಿಮುಖವಾಗಿದೆ. ಕುಮಟಾ ತಾಲೂಕಿನ 3 ಕುಟುಂಬಗಳು ಹಾಗೂ ಹೊನ್ನಾವರದ 4 ಕುಟುಂಬಗಳು ಮಾತ್ರವೇ ಈಗ ಆ ಕಾಯಕದಲ್ಲಿ ತೊಡಗಿದಂತಿದೆ ಎನ್ನುತ್ತಾರೆ ಗಜಾನನ ಭಟ್ಟರು.
ನೂಲು ಹುಣ್ಣಿಮೆ : ಶ್ರಾವಣ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು (ನೂಲು ಹುಣ್ಣಿಮೆ) ಧನಿಷ್ಠ ನಕ್ಷತ್ರದಂದು ಹೋಮವನ್ನು ಮಾಡಿ ಮತ್ತು ಹೊಸ ಜನಿವಾರದ ಧಾರಣೆ ಮಾಡುತ್ತಾರೆ. ಅಂದಿನ ದಿನವೇ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ.
ಕಾಯಕಗಳು ಬಹುತೇಕ ಕಣ್ಮರೆ : ವೇಗದ ಬದುಕಿನಲ್ಲಿ ಹಿಂದಿನ ಕಾಯಕಗಳು ಬಹುತೇಕ ಕಣ್ಮರೆಯಾಗುತ್ತಿದೆ. ಹೀಗಾಗಿ ಈ ಜನಿವಾರದ ತಯಾರಿಕೆಯೂ ಇದರಿಂದ ಹೊರತಲ್ಲವಾದರೂ, ಬದುಕಿನ ಭಾಗವಾಗಿದ್ದ ಈ ಕಾಯಕ ಬೆರಳೆಣಿಕೆಯ ಕುಟುಂಬದಲ್ಲಾದರೂ ಇನ್ನೂ ಇರುವುದನ್ನು ಸಂತಸದ ಸಂಗತಿ ಎನ್ನುತ್ತಾರೆ ವೈದಿಕ ವೃತ್ತಿಯ ವಿನಾಯಕ ಭಟ್ಟರು.
ಹಣದ ವ್ಯಾಮೋಹ ಇಲ್ಲ: ಹಿಂದಿನ ಕಾಲದಲ್ಲಿ ಜನಿವಾರಕ್ಕೆ ಗೌರವವಾಗಿ, ಪಡಿ, ಅಕ್ಕಿ, ಕಾಯಿ ಕೊಟ್ಟು ಗೌರವ ಧನವನ್ನೂ ಆಯಾ ಕಾಲಕ್ಕೆ ಅನುಗುಣವಾಗಿ ನೀಡುತ್ತಿದ್ದರು. ಹಣದ ಯಾವುದೇ ವ್ಯಾಮೋಹವಿಲ್ಲದೆ ಜನಿವಾರವನ್ನು ಮನೆ ಮನೆಗೆ ತಲುಪಿಸುವ ಕಾಯಕದಲ್ಲಿ ಹಲವರು ತೊಡಗಿದ್ದರು. ಸಾಂಪ್ರದಾಯಿಕವಾಗಿ ಬ್ರಹ್ಮಜ್ಞಾನದ ಹತ್ತಿರಕ್ಕೆ ಬರುವುದು ಎನಿಸಿಕೊಳ್ಳುವ ಹಿಂದೂ ಧರ್ಮದ ಷೋಡಶ ಸಂಸ್ಕಾರಗಳಲ್ಲಿ ಒಂದಾದ ಉಪನಯನದ ಸಂಸ್ಕಾರದಲ್ಲಿ ಯಜ್ಞೋಪವೀತದ ಧಾರಣೆಯಾಗುತ್ತದೆ.