ರಾಜಸೀಟು ಉದ್ಯಾನವನದಲ್ಲಿ ಕಣ್ಮನ ಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ!

ಹೊಸದಿಗಂತ ವರದಿ, ಮಡಿಕೇರಿ:

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ವತಿಯಿಂದ ನಗರದ ರಾಜಸೀಟು ಉದ್ಯಾನವನದಲ್ಲಿ ಫೆ.6ರವರೆಗೆ ನಡೆಯಲಿರುವ ‘ಫಲಪುಷ್ಪ ಪ್ರದರ್ಶನ’ಕ್ಕೆ ಶುಕ್ರವಾರ ಸಂಜೆ ಚಾಲನೆ ದೊರಕಿದ್ದು, ಫಲಪುಷ್ಪ ಪ್ರದರ್ಶನ ಕಣ್ಮನ ಸೆಳೆಯುತ್ತಿದೆ.
ಅಲ್ಲಿನ ಪುಷ್ಪಗಳಿಂದ ನಿರ್ಮಾಣವಾಗಿರುವ ಕಲಾಕೃತಿಗಳು ಒಂದಕ್ಕೊಂದು ಗಮನ ಸೆಳೆಯುತ್ತಿವೆ. ನಾಲ್ಕುನಾಡು ಅರಮನೆ ಕಲಾಕೃತಿಯಲ್ಲಿ ರಾಜರು ಕುಳಿತಿರುವುದು, ಹಾಗೆಯೇ ಕೊಡವ ಉಡುಪಿನಲ್ಲಿ ಸ್ವಾಗತಿಸುವ ಚಿತ್ರಗಳು, ಸಿಂಡ್ರೆಲಾ, ವೈನ್‍ಕಪ್ ಒಳಗೊಂಡ ಚಿತ್ರಗಳು, ಹೆಸರು ಕಾಳು ಮತ್ತು ಬಿಳಿ ಎಳ್ಳು ಮೂಲಕ ಕ್ರಿಯಾಶೀಲವಾಗಿ ನಿರ್ಮಾಣ ಮಾಡಿರುವ ಸೈನಿಕ, ಹೀಗೆ ರಾಜಸೀಟು ಉದ್ಯಾನವನ ಮತ್ತೊಮ್ಮೆ ಮಗದೊಮ್ಮೆ ನೋಡುವಂತೆ ಜನಮನ ಸೆಳೆಯುತ್ತಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್,ಅಂಬೇಡ್ಕರ್, ವೀರಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ, ರಾಷ್ಟ್ರಕವಿ ಕುವೆಂಪು, ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಷ್ ಚಂದ್ರಬೋಸ್, ಭಗತ್‍ಸಿಂಗ್, ಪುನೀತ್ ರಾಜ್‍ಕುಮಾರ್ ಸೇರಿದಂತೆ ವಿವಿಧ ಗಣ್ಯರ ಕಲಾಕೃತಿಯನ್ನು ತರಕಾರಿ/ ಹಣ್ಣುಗಳಲ್ಲಿ ಕೆತ್ತನೆ ಮಾಡಲಾಗಿದೆ. ವಿವಿಧ ಅಲಂಕಾರಿಕ ಗಿಡಗಳಾದ ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನ ಹೂವಿನ ಜೋಡಣೆ ಹಾಗೂ ಅಂಥೋರಿಯಂ ಹೂವಿನ ಪ್ರದರ್ಶನ ಗಮನ ಸೆಳೆಯುತ್ತಿದೆ.
ಚುನಾವಣೆಯ ಮತದಾನದ ಮಹತ್ವ ಕುರಿತು ಜಾಗೃತಿ ಅಭಿಯಾನ ಮತ್ತೊಮ್ಮೆ ಓದುವಂತೆ ಮಾಡುತ್ತದೆ. 18 ವರ್ಷ ಪೂರ್ಣಗೊಂಡಿರುವವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿ, ಹೆಸರು ಸೇರ್ಪಡೆ ಮಾಡಿರುವವರು ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ, ಹೀಗೆ ಪ್ರತಿಯೊಂದು ಕಲಾಕೃತಿಗಳು ನೋಡುಗರನ್ನು ಮತ್ತೊಮ್ಮೆ ವೀಕ್ಷಿಸುವಂತೆ ಮಾಡುತ್ತವೆ.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಮೋದ್ ಸಿ.ಎಂ., ನಗರಸಭಾ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಉದ್ಘಾಟನಾ ಕಾರ್ಯಕ್ರಮದಲ್ಲಿದ್ದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಫಲಪುಷ್ಪ ಪ್ರದರ್ಶನವನ್ನು ವರ್ಷದಿಂದ ವರ್ಷಕ್ಕೆ ಅತ್ಯುತ್ತಮವಾಗಿ ಏರ್ಪಡಿಸಲಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜಾಸೀಟು ಉದ್ಯಾನವನ ಫಲಪುಷ್ಪ ಪ್ರದರ್ಶನವು ಕಣ್ಮನ ಸೆಳೆಯುತ್ತಿದ್ದು, ಪ್ರವಾಸಿಗರಲ್ಲಿ ಒಂದು ರೀತಿ ಸಂತಸ ತರುತ್ತದೆ. ನಾಡಿನ ಪ್ರವಾಸಿಗರು ರಾಜಸೀಟು ಉದ್ಯಾನವನದ ಫಲಪುಷ್ಪ ಪ್ರದರ್ಶನ ವೀಕ್ಷಿಸುವಂತಾಗಬೇಕು ಎಂದರು.
ಮುಖ್ಯಮಂತ್ರಿಗಳಿಂದ ಉದ್ಘಾಟನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಗೆ ಆಗಮಿಸಿ ಗ್ರೇಟರ್ ರಾಜಸೀಟು ಮತ್ತು ಗಾಂಧಿ ಭವನ ಉದ್ಘಾಟಿಸಲಿದ್ದಾರೆ. ಇತರೆ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಶಾಸಕರು ಇದೇ ಸಂದರ್ಭದಲ್ಲಿ ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಡಗು ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.


60ಕ್ಕೂ ಅಧಿಕ ಮಳಿಗೆಗಳು: ನಗರದ ಗಾಂಧಿ ಮೈದಾನದಲ್ಲಿ 60 ಕ್ಕೂ ಹೆಚ್ಚು ವಸ್ತು ಪ್ರದರ್ಶನ ಮಳಿಗೆಯನ್ನು ನಿರ್ಮಾಣ ಮಾಡಲಾಗಿದ್ದು, ತೋಟಗಾರಿಕೆ, ಪಶುಪಾಲನೆ, ಕೃಷಿ, ಆಯುಷ್, ಕಾಫಿ ಮಂಡಳಿ, ಕೈಗಾರಿಕೆ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ, ಕಾರ್ಮಿಕ, ಹೀಗೆ ಹಲವು ಇಲಾಖೆಗಳು ವಸ್ತುಪ್ರದರ್ಶನ ಏರ್ಪಡಿಸಿರುವುದು ವಿಶೇಷವಾಗಿದೆ.
ವೈನ್ ಮೇಳಕ್ಕೆ ಚಾಲನೆ: ಫಲಪುಷ್ಪ ಪ್ರದರ್ಶನ ಪ್ರಯುಕ್ತ ನಗರದ ಗಾಂಧಿ ಮೈದಾನದಲ್ಲಿ ವೈನ್‍ಮೇಳವನ್ನು ಆಯೋಜಿಸಲಾಗಿದ್ದು, ಕೊಡಗಿನ ಹೋಮ್ ಮೇಡ್ ವೈನ್‍ಗಳು ಹಾಗೂ ಕರ್ನಾಟಕ ದ್ರಾಕ್ಷರಸ ಮಂಡಳಿ ವತಿಯಿಂದ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.
ವೈನ್ ಮೇಳಕ್ಕೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಕರ್ನಾಟಕ ದ್ರಾಕ್ಷರಸ ಮಂಡಳಿ ಅಧ್ಯಕ್ಷ ನಾರಾಯಣ ರೆಡ್ಡಿ, ನಿರ್ದೇಶಕ ಅಭಿಲಾಷ್, ವ್ಯವಸ್ಥಾಪಕ ನಿರ್ದೇಶಕ ಸೋಮು, ಜನರಲ್ ಮ್ಯಾನೇಜರ್ ಸರ್ವೇಶ್ ಇತರರು ಇದ್ದರು.
ವೈನ್ ತಯಾರಿಸುವ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು. ಒಟ್ಟಾರೆ ರಾಜಸೀಟಿ ಉದ್ಯಾನವನದಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನ ಮತ್ತು ಗಾಂಧಿ ಮೈದಾನದಲ್ಲಿ ಏರ್ಪಡಿಸಲಾಗಿರುವ ವಸ್ತು ಪ್ರದರ್ಶನ ಗಮನ ಸೆಳೆಯುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!