ಸೀತಿಕೊಂಡದಲ್ಲಿ 11ನೇ ಶತಮಾನದ ಶಾಸನ‌ ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹಿರೇಕೆರೂರು: ಐತಿಹಾಸಿಕ ಬೇಚರಾತ್ ಗ್ರಾಮದ ಕಟ್ಟೆಪ್ಪ ದೇವರಹಳ್ಳಿ ಅವರ ಹೊಲದ ಬದುವಿನಲ್ಲಿ ಕಲ್ಯಾಣ ಚಾಲುಕ್ಯರ 2ನೇ ಜಗದೇಕಮಲ್ಲನ ಕಾಲದ 23 ಸಾಲುಗಳುಳ್ಳ ಶಾಸನ ಪತ್ತೆಯಾಗಿದೆ.

ಶಿಲಾ ಶಾಸನದ ಮೇಲ್ಬಾಗದಲ್ಲಿ ಸೂರ್ಯ, ಚಂದ್ರ ಮತ್ತು ಹಸು-ಕರುವಿಗೆ ಹಾಲುಣಿಸುವ ಚಿತ್ರವಿದೆ. ಮೇಲ್ಬಾಗದ ಶಿಲ್ಪದ ಜೊತೆಗಿರುವ ಶಾಸನ ಶ್ಲೋಕ ಅಸ್ಪಷ್ಟವಾಗಿದೆ. ಕೆಳಭಾಗದಲ್ಲಿ ಕಲ್ಯಾಣ ಚಾಲುಕ್ಯರ ಚಾಳುಕ್ಯಾಭರಣ 2ನೇ ಜಗದೇಕಮಲ್ಲದೇವನ ಮಂತ್ರಿಯಾಗಿದ್ದಾಗ, ಬಮ್ಮರಸದೇವ ನಾಗರಖಂಡ ಎಪ್ಪತ್ತನ್ನು ಆಳುತ್ತಿರುವಾಗ ಸುಮಾರು 1029ರಂದು ಕ್ರಿ.ಶ ಕೋಣವತ್ತಿಯ ಕೆರೆಗೆ ಭೂದಾನಕೊಟ್ಟ ಉಲ್ಲೇಖವಿದೆ.

ಕೆರೆ, ಬಾವಿ ಕಟ್ಟಿಸುವುದು, ತುಂಬು ಕಾಲುವೆಗಳನ್ನು ನಿರ್ಮಿಸುವುದು ಮುಂತಾದ ಪುಣ್ಯದ ಕಾರ್ಯವೆಂದು ನಂಬಿ ಅರಸರು, ಅಧಿಕಾರಿಗಳು ಅನೇಕ ದಾನದತ್ತಿಗಳನ್ನು ಬಿಟ್ಟಿರುವುದು ತಿಳಿದು ಬಂದಿದೆ.

ರಟ್ಟಿಹಳ್ಳಿಯ ಪ್ರಿಯದರ್ಶಿನಿ ಪ್ರಥಮ ದರ್ಜೆ ಕಾಲೇಜಿನ ಸಂಶೋಧಕ ಪ್ರಾಧ್ಯಾಪಕ ಡಾ.ಚಾಮರಾಜ ಕಮ್ಮಾರ ಮತ್ತು ಬಿ.ಆರ್. ತಂಬಾಕದ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಂಶೋಧಕ ಪ್ರಾಧ್ಯಾಪಕ ಡಾ.ಎಸ್.ಬಿ.ಚನ್ನಗೌಡ್ರು ಈ ಸಂಶೋಧನೆ ನಡೆಸಿ ಶಾಸನ ಪತ್ತೆ ಮಾಡಿದ್ದಾರೆ.

ಹಾಳುಬಿದ್ದ ರಾಮಲಿಂಗೇಶ್ವರ ದೇವರ ಗರ್ಭಗುಡಿಯಲ್ಲಿ ಲಿಂಗ, ತ್ರುಟಿತಗೊಂಡ ವಿಷ್ಣುವಿನ ಶಿಲ್ಪ, ಅಪರೂಪದ ಹುಲಿಬೇಟೆಶಿಲ್ಪ, ನಂದಿಶಿಲ್ಪಗಳು ಅಲ್ಲಲ್ಲಿ ಕಂಡುಬಂದಿವೆ.

ಪೌರಾಣಿಕ ಸ್ತ್ರೀ ನಾಮವಿರುವ `ಸೀತಿಕೊಂಡ’ವು ಹತ್ತಿರದ ಬೇಟಕೆರೂರ ಗುಡ್ಡದಲ್ಲಿ ರಾಮಚಂದ್ರನು ವಾಸವಾಗಿದ್ದನು ಅಲ್ಲದೇ ಈ ಪ್ರದೇಶದಲ್ಲಿ ಸೀತವ್ವ (ಬಾವಿಯ ಹತ್ತಿರ) ವಾಸವಾಗಿದ್ದರಿಂದ ಈ ಊರಿಗೆ ಸೀತಮ್ಮನ ಕೊಂಡ, ಸೀತಮ್ಮನ ಬಾವಿ, “ಸೀತಿಕೊಂಡ” ಎಂಬ ಹೆಸರು ಬಂದಿರಬಹುದೆಂದು ಊಹಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!