ಒಂದು ವರ್ಷದ ಮಗುವನ್ನು ಆಸ್ಪತ್ರೆಯಿಂದ ಅಪಹರಿಸಿ ಪರಾರಿಯಾದ ಅಪರಿಚಿತ ವ್ಯಕ್ತಿ

ಹೊಸದಿಗಂತ ವಿಜಯಪುರ:

ಜಿಲ್ಲಾಸ್ಪತ್ರೆಯಲ್ಲಿ 1 ವರ್ಷದ ಮಗುವನ್ನು ಅಪರಿಚಿತ ವ್ಯಕ್ತಿ ಅಪಹರಿಸಿರುವ ಘಟನೆ ನಡೆದಿದ್ದು, ಮಗುವಿಗಾಗಿ ತಾಯಿ ಕಣ್ಣೀರು ಹಾಕಿ ಗೋಳಿಡುವಂತಾಗಿದೆ.

ನಗರದ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ತನ್ನ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿ, ಇಬ್ಬರು ಮಕ್ಕಳೊಂದಿಗೆ ಆಸ್ಪತ್ರೆಯಲ್ಲಿದ್ದ ವೇಳೆ ಅಪರಿಚಿತ ವ್ಯಕ್ತಿ ಹಾಡಹಗಲೇ 1 ವರ್ಷದ ಸಂದೀಪನನ್ನು ಕದ್ದುಕೊಂಡು ಪರಾರಿ ಆಗಿದ್ದಾನೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ನಿವಾಸಿ ರಾಮೇಶ್ವರಿ ತನ್ನ ಇಬ್ಬರು ಮಕ್ಕಳೊಂದಿಗೆ, ತಾಯಿ ಪದ್ಮಾ ಪವಾರ್ ಜೊತೆಗೆ ವಿಜಯಪುರಕ್ಕೆ ಸಂಬಂಧಿಕರ ಮನೆಗೆ ಬಂದಿದ್ದಾರೆ. ಈ ವೇಳೆ ತಾಯಿ ಪದ್ಮಾ ಪವಾರ್ ಆರೋಗ್ಯ ಕೆಟ್ಟಿದೆ. ಹೀಗಾಗಿ ಮೂರು ದಿನಗಳ ಹಿಂದೆ ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾಳೆ.

ನ. 23ರ ಬೆಳಗ್ಗೆ 10.30 ರಿಂದ 11 ಗಂಟೆಯೊಳಗೆ ರಾಮೇಶ್ವರಿ ತಾಯಿ ಪದ್ಮಾಳ ಕಫದ ಪರೀಕ್ಷೆಗಾಗಿ ತಾಯಿ ಬಳಿ 1 ವರ್ಷದ ಮಗು ಸಂದೀಪನನ್ನು ಬಿಟ್ಟು ಹೋಗಿದ್ದಾಳೆ. ಈ ವೇಳೆ ಸಂದೀಪ ಎದ್ದು ಅಳಲು ಶುರು ಮಾಡಿದಾಗ ಇನ್ನೊಬ್ಬ ಪರಿಚಿತ 10 ವರ್ಷದ ಬಾಲಕ ಸಂದೀಪನನ್ನು ಎತ್ತಿಕೊಂಡು ಆಟವಾಡಿಸಿದ್ದಾನೆ.

ಇದನ್ನೇ ಗಮನಿಸಿದ ಅಪರಿಚಿತ ವ್ಯಕ್ತಿ ವಾರ್ಡ್ ನೊಳಗೆ ಬಂದು ಮಗು ಎತ್ತಾಡಿಸಿದ್ದಾನೆ. ಆ ಬಳಿಕ ಸಂದೀಪನನ್ನು ಬಾಲಕ ಹೊರಗೆ ತೆಗೆದುಕೊಂಡು ಹೋದಾಗ, ಅಪರಿಚಿತ ವ್ಯಕ್ತಿ ಮಗುವನ್ನು ಕದ್ದುಕೊಂಡು ಹೋಗಿದ್ದಾನೆ.

ಅಪರಿಚಿತ ವ್ಯಕ್ತಿ ಕುಡಿದ ಮತ್ತಿನಲ್ಲಿರೋದು ತಿಳಿದು ಬಂದಿದೆ. ಇನ್ನು ಅಪರಿಚಿತ ವ್ಯಕ್ತಿ ಇದೇ ವಾರ್ಡ್ ಹೊರಗಡೆ ರಾತ್ರಿ ಮಲಗಿಕೊಂಡಿದನಂತೆ, ಯಾರೋ ರೋಗಿಯ ಸಂಬಂಧಿ ಇರಬೇಕು ಅಂತ ಅಂದುಕೊಂಡಿದ್ದಾರೆ.

ಬಳಿಕ ವಾಪಸ್ ಬಂದ ರಾಮೇಶ್ವರಿ ನೋಡಿದ ವೇಳೆ, ಮಗು ಕಾಣದಿದ್ದಾಗ ತಾಯಿ ಹಂಬಲಿಸಿ ಹುಡುಕಾಡಿದ್ದಾಳೆ.

ಬಳಿಕ ಜಿಲ್ಲಾಸ್ಪತ್ರೆಯಲ್ಲಿರುವ ಪೊಲೀಸ್ ಠಾಣೆಗೆ ಹಾಗೂ ವೈದ್ಯರ ಗಮನಕ್ಕೆ ತಂದಿದ್ದಾಳೆ. ಈ ವೇಳೆ ಪೊಲೀಸರು ಜಿಲ್ಲಾಸ್ಪತ್ರೆ ಆವರಣ ಜೊತೆಗೆ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ.

ಗಾಂಧಿ ಚೌಕ್ ಪೊಲೀಸ್ ಠಾಣೆಗೆ ತೆರಳಿ ರಾಮೇಶ್ವರಿ ದೂರು ನೀಡಿದ್ದು, ಪೊಲೀಸರು ಮಗು ಕಳ್ಳತನವಾಗಿರುವ ಮಾಹಿತಿ ರವಾನಿಸಿ, ಮಗುವಿನ ಪತ್ತೆಗಾಗಿ ಬಲೆ ಬೀಸಿದ್ದಾರೆ. ಅಪರಿಚಿತ ವ್ಯಕ್ತಿ ಕುಡಿದ ಮತ್ತಿನಲ್ಲಿ ಮಗುವನ್ನು ಕದ್ದೊಯ್ದಿದ್ದಾನಾ ಅಥವಾ ಮಗುವನ್ನು ಕಳ್ಳತನ ಮಾಡುವ ಉದ್ದೇಶದಿಂದಲೇ ಕೃತ್ಯ ನಡೆಸಿದ್ದಾನಾ ಇಲ್ಲ ಈಚೆಗೆ ರಾಮೇಶ್ವರಿ ಹಾಗೂ ಆಕೆಯ ಗಂಡ ರತನ್ ಸಾಳುಂಕೆ ಮಧ್ಯೆ ಜಗಳವಾಗಿರುವ ವಿಷಯ ತಿಳಿದಿದ್ದು, ಈ ಹಿನ್ನೆಲೆಯಲ್ಲಿ ಮಗು ಕಳ್ಳತನವಾಗಿದೆಯಾ ? ಎನ್ನುವ ಅನುಮಾನ ವ್ಯಕ್ತವಾಗಿದೆ.

 

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!