ತಿಂಗಳಲ್ಲೇ ಪ್ರವಾಸಿ ಮಾರ್ಗದರ್ಶಕರಿಗೆ ಸಿಹಿ ಸುದ್ದಿ ನೀಡುವೆ: ಸಚಿವ ಆನಂದ್ ಸಿಂಗ್

ಹೊಸದಿಗಂತ ವರದಿ, ವಿಜಯನಗರ:

ರಾಜ್ಯದ ಎಲ್ಲ ಪ್ರವಾಸಿ ಮಾರ್ಗದರ್ಶಕರಿಗೆ ತಿಂಗಳಲ್ಲೇ ಸಿಹಿ ಸುದ್ದಿ ನೀಡುವೆ ಎಂದು‌ ಪರಿಸರ, ಜೀವಿಶಾಸ್ತ್ರ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಹೇಳಿದರು.
ವಿಶ್ವ ಪ್ರಸಿದ್ಧ ‌ಹಂಪಿಯ ಶ್ರೀ ಶವರಾಮ ಅವಧೂತರ ಮಠದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರವಾಸಿ ಮಾರ್ಗದರ್ಶಕರ ರಾಜ್ಯ ಸಂಘದ ಉದ್ಘಾಟನೆ ಹಾಗೂ ಗುರುತಿನ ಚೀಟಿ ವಿತರಣೆ ಸಮಾರಂಭಕ್ಕೆ ಚಾಲನೆ ‌ನೀಡಿ‌ ಮಾತನಾಡಿದರು. ಪ್ರವಾಸಿ ಮಾರ್ಗದರ್ಶಕರ ಸಮಸ್ಯೆಯನ್ನು ಹತ್ತಿರದಿಂದ ನೋಡಿರುವೆ, ಅದರಲ್ಲೂ ಕೊರೋನಾ ಮಹಾಮಾರಿಯಲ್ಲಿ ಸಾಕಷ್ಟು ಸಮಸ್ಯೆಯನ್ನು ಎದುರಿಸಿದ್ದಾರೆ, ಸಂಘದ ಸದಸ್ಯರು ತಿಂಗಳ ಮಾಶಾಸನ ಸೇರಿದಂತೆ ‌ನಾನಾ‌ ಬೇಡಿಕೆಗಳ ಮನವಿಯನ್ನು ಸಲ್ಲಿಸಿದ್ದು, ನಮ್ಮ ಅಧಿಕಾರಿಗಳೊಂದಿಗೆ ಚೆರ್ಚಿಸಿ ತಿಂಗಳಲ್ಲೇ‌ ಎಲ್ಲರಿಗೂ ಸಿಹಿ ಸುದ್ದಿ ನೀಡುವೆ ಎಂದರು.
ಈ ಹಿಂದೆಯೇ ಪ್ರವಾಸಿ ಮಾರ್ಗದರ್ಶಕರು ಗಮನಸೆಳೆದಿದ್ದರು, ಕೆಲ ತಾಂತ್ರಿಕ ಸಮಸ್ಯೆಗಳಿಂದ ಈಡೇರಿಸಲು ಸಾಧ್ಯವಾಗಿಲ್ಲ, ತಮ್ಮ ನೋವನ್ನು ಸರ್ಕಾರದ ಗಮನಕ್ಕೆ ತರುವೆ, ಮಳೆ, ಬಿಸಲು, ಛಳಿಯನ್ನು ಲೆಕ್ಕಿಸದೇ ಬಂದಂತಹ ಪ್ರವಾಸಿಗರಿಗೆ ಇತಿಹಾಸ ಪರಿಚಯಿಸುವ ಗೈಡ್ಸ್ ಗಳಿಗೆ ತಿಂಗಳ ಮಾಶಾಸನ ನೀಡುವುದರಿಂದ ಸರ್ಕಾರಕ್ಕೇನು ದೊಡ್ಡ ಹೊರೆಯಾಗೋಲ್ಲ, ತಿಂಗಳಿಗೆ 5 ಸಾವಿರ ರೂ.ಕೇಳಿದ್ದೀರಿ, 10 ಸಾವಿರ ಕೊಟ್ಟರೂ ತಪ್ಪಿಲ್ಲ, ಎಲ್ಲದಕ್ಕೂ ನಿಯಮಗಳಿವೆ, ಇಲಾಖೆ ಕಾರ್ಯದರ್ಶಿ ಗಳೊಂದಿಗೆ ಚೆರ್ಚಿಸುವೆ, ಇಲ್ಲಿ ವರೆಗೂ ಸಂಘ ರಚನೆಯಾಗಿರಲಿಲ್ಲ, ನಂತರ ಸಂಘದ ಮೂಲಕ ನೇಮಕ ಮಾಡಿ ಎನ್ನುವುದು ಶುರುವಾಗಬಹುದು, ಇವೆಲ್ಲವೂ ತಾಂತ್ರಿಕ ಸಮಸ್ಯೆಗಳು ಇರುವದರಿಂದ ಸರ್ಕಾರ ಸೂಕ್ಷ್ಮವಾಗಿ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು. ರಾಜ್ಯಾದ್ಯಂತ
ಪ್ರವಾಸಿ ಮಾರ್ಗದರ್ಶಕರಿಗೆ ಕನಿಷ್ಠ 6 ತಿಂಗಳಿಗೋಮ್ಮೆ ಇಲಾಖೆಯಿಂದ ತರಬೇತಿ ನೀಡುವ ಕೆಲಸವಾಗಬೇಕು, ಹಾಗೂ ಗೈಡ್ಸ್ ಗಳಿಗೆ ಅನುಕೂಲವಾಗಲು ಸಂಪೂರ್ಣ ‌ಮಾಹಿತಿಯುಳ್ಳ ಹ್ಯಾಂಡ್ ಬುಕ್ ವಿತರಣೆಗೆ ಕೂಡಲೇ ಅಧಿಕಾರಿಗಳೊಂದಿಗೆ ಮಾತನಾಡಿ, ಸೂಚಿಸುವೆ ಎಂದರು.

ಪಂಪಾ ವಿರುಪಾಕ್ಷೇಶ್ವರ ಕೃಪೆ, ಆರ್ಶಿವಾದದಿಂದ ನಮ್ಮ ಕೇಂದ್ರ ಸ್ಥಾನ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡಿಕೊಂಡಿದ್ದೇವೆ. ಎಲ್ಲರೂ ನೆಮ್ಮದಿಯಿಂದ ಇದ್ದೇವೆ, ಅಧಿಕಾರ ಯಾರಿಗೂ ಶಾಶ್ವತವಲ್ಲ, ಈ ಇತಿಹಾಸ ಯಾರೂ ಮೆರೆಮಾಚಲು ಸಾಧ್ಯವೇ ಇಲ್ಲ, ನೂತನ ಜಿಲ್ಲೆಯ ಅಭಿವೃದ್ಧಿ ನಮ್ಮ ಮುಂದಿದೆ, ಈ ಕುರಿತು ಮುಖ್ಯಮಂತ್ರಿ ಗಳೊಂದಿಗೆ ಚೆರ್ಚಿಸಿರುವೆ, ಮಾಸ್ಟರ್ ಪ್ಲಾನ್ ರೆಡಿಯಾಗಿದೆ, ಅವದಿಯಲ್ಲಿ ಜಿಲ್ಲೆಯನ್ನು ಮಾದರಿಯನ್ನಾಗಿ ‌ಮಾಡುವೆ, ಇದು ಮಾತಲ್ಲ, ಅಭಿವೃದ್ಧಿಪಡಿಸಿ ತೋರಿಸುವೆ ಎಂದು ತಿಳಿಸಿದರು.

ಅರ್ಜುನನಂತೆ ಗುರಿ ಇರಬೇಕು, ಕೃಷ್ಣನಂತೆ ತಂತ್ರಗಾರಿಕೆ ಬೇಕು: ವಿಜಯನಗರ ಜಿಲ್ಲೆ ಮಾಡಲು ಕನಸು, ಮನಸ್ಸಿನಲ್ಲೇ ಇರಲಿಲ್ಲ, ಎಲ್ಲದಕ್ಕೂ ಕಾಲ ಕೂಡಿ ಬರಬೇಕು, ಪಂಪಾ ವಿರುಪಾಕ್ಷೇಶ್ವರ ನ ಪುಣ್ಯ ಭೂಮಿ, ವಿಜಯನಗರ ಸಾಮ್ರಾಜ್ಯದ ನೆಲೆಯಲ್ಲಿ ನಿಂತು ಹೇಳುವೆ, ಕಳೆದ 20ವರ್ಷಗಳ ಹಿಂದೆ ವಿಜಯನಗರ ಜಿಲ್ಲೆಯನ್ನು ಮಾಡುವ ಸಂಕಲ್ಪ ಮಾಡಿದ್ದೇ, ಅರ್ಜುನನಂತೆ ಗುರಿ ಇರಬೇಕು, ಕೃಷ್ಣನಂತೆ ತಂತ್ರಗಾರಿಕೆ ಇರಬೇಕು ಎನ್ನುವ ಮಾತಿದೆ ಎಂದು ಜಿಲ್ಲೆ‌ ರಚನೆ ಮಾಡಿದ್ದನ್ನು ಮೆಲುಕು ಹಾಕಿದರು. ಸಮ್ಮಿಶ್ರ ಸರ್ಕಾರದ ಅವದಿಯಲ್ಲಿ ನಮ್ಮ ವಿಜಯನಗರ ನೂತನ ಜಿಲ್ಲೆ ರಚನೆ ಬಗ್ಗೆ ಬೇಡಿಕೆ ಸಲ್ಲಿಸಿದೆ, ಅದಾಗದಿದ್ದಾಗ ತೆಗೆದುಕೊಂಡ ನಿರ್ಧಾರ ಸಣ್ಣದಲ್ಲ, ಅದರ ಹಿಂದೆ ಶ್ರೀ ಪಂಪಾ ವಿರುಪಾಕ್ಷೇಶ್ವರ ಆರ್ಶಿವಾದ ಇತ್ತು, ಅದಕ್ಕಾಗಿಯೇ ಇಂತಹ ದೊಡ್ಡ ಹೆಜ್ಜೆಯನ್ನು ಇಟ್ಟೆ, ರಾಜೀನಾಮೆ ನಿರ್ದಾರ ತೆಗೆದುಕೊಂಡೆ, ಇದು ಸಾಮಾನ್ಯ ನಿರ್ಧಾರವಲ್ಲ ಎಂದರು.

ಬಿಎಸ್ ವೈ ಇತಿಹಾಸ ಸೃಷ್ಟಿಸಿದ್ದಾರೆ: ಸಮ್ಮಿಶ್ರ ಸರ್ಕಾರ ಪಥನವಾಗಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ, ನೂತನ ಜಿಲ್ಲೆ ರಚನೆ ಬಗ್ಗೆ ಪ್ರಸ್ತಾಪಿಸಿದ ‌ಕೂಡಲೇ ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರುವ ಮೂಲಕ ನೂತನ ಜಿಲ್ಲೆಗೆ‌ ಮುದ್ರೆ ಒತ್ತಿ, ಇತಿಹಾಸ ಸೃಷ್ಟಿಸಿದರು. ಅವರನ್ನು ಎಂದಿಗೂ ಮರೆಯೋಲ್ಲ, ಗ್ರಾ.ಪಂ.ಯನ್ನು ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕಾದರೇ ಸರ್ಕಾರ ಕೂಡಲೇ ತೀರ್ಮಾನ ತೆಗೆದುಕೊಳ್ಳೋಲ್ಲ, ಇಂತಹದರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ನೂತನ ಜಿಲ್ಲೆ ನಿರ್ಧಾರ ತೆಗದುಕೊಂಡು ಇತಿಹಾಸ ಸೃಷ್ಟಿಸಿದರು. ಇಂತಹ ತೀರ್ಮಾನ ಯ್ಯಾವ ಸಿ.ಎಂ.ತೆಗೆದುಕೊಳ್ಳೋಕೆ ಆಗೋಲ್ಲ, ಇಲ್ಲಿವರೆಗೆ ಸಾಕಷ್ಟು ಜನ ಮುಖ್ಯಮಂತ್ರಿ ಗಳನ್ನು‌ ನೋಡಿರುವೆ, ಇಂತಹ ಮುಖ್ಯಮಂತ್ರಿ ಗಳು ಸಿಗುವುದು ಅಪರೂಪ. ನೂತನ ಜಿಲ್ಲೆಯ ಫೈಲ್ ಇದೆ ಅಂದಾಗ ಮುಖ್ಯಮಂತ್ರಿಗಳು ಆಲೋಚನೆ ಮಾಡದೇ ಸಹಿ ಮಾಡುವ ‌ಮೂಲಕ ಮುದ್ರೆ ಒತ್ತಿದ್ದಾರೆ, ಇಲ್ಲಿಯೂ ಪಂಪಾವಿರುಪಾಕ್ಷೇಶ್ವರನ ಕೃಪೆ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರವಾಸಿ ಮಾರ್ಗದರ್ಶಕರ ಸಂಘದ ಅಧ್ಯಕ್ಷ ಜಿ.ಮಂಜುನಾಥ ಗೌಡ, ಜಿಲ್ಲಾಧ್ಯಕ್ಷ ಗೋಪಾಲ್ ವಿ, ಆನೆಗುಂದಿ ರಾಜವಶಂಸ್ಥ ಶ್ರೀ ಕೃಷ್ಣದೇವರಾಯ, ಫ್ರೊ.ಎನ್.ಚಿನ್ನಸ್ವಾಮಿ ಸೋಸಲೆ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಡಾ.ತಿಪ್ಪೇಸ್ವಾಮಿ, ಚಂದ್ರ ಶೇಖರ್ ಶಾಸ್ತ್ರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ವಿರುಪಾಕ್ಷೀ ವಿ.ಹಂಪಿ, ಈರಣ್ಣ ಹಕ್ಕಿ, ರಾಜಶೆಖರ್ ಮಠ್ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!