ಸರೋವರ ಕ್ಷೇತ್ರ ಪ್ರಸಿದ್ಧಿಯ ಅನಂತಪುರ ದೇವರ ಮೊಸಳೆ ಬಬಿಯಾ ಇನ್ನಿಲ್ಲ

ಹೊಸದಿಗಂತ ವರದಿ ಕಾಸರಗೋಡು:

ಸರೋವರ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಅತ್ಯಂತ ಕಾರಣಿಕ ಪುಣ್ಯ ದೇವಾಲಯಗಳಲ್ಲಿ ಒಂದಾಗಿರುವ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮೊಸಳೆ ಬಬಿಯಾ ಭಾನುವಾರ ಮಧ್ಯರಾತ್ರಿ ಹರಿಪಾದ ಸೇರಿತು.
ಕ್ಷೇತ್ರ ಪಾಲಕನಂತಿದ್ದ ಮೊಸಳೆಯು ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಈ ಮೊಸಳೆಗೆ 80ಕ್ಕೂ ಅಧಿಕ ವಯಸ್ಸು ಎಂದು ಅಂದಾಜಿಸಲಾಗಿದೆ.
ದೇಗುಲದ ನೈವೇದ್ಯವನ್ನು ಮಾತ್ರ ಸೇವಿಸಿ, ಸಾಧುವಾಗಿ ಜೀವಿಸುತ್ತಿದ್ದ ಮೊಸಳೆಯನ್ನು ಕಣ್ಣಿಗೆ ಕಾಣುವ ದೇವರೆಂದೇ ಜನರು ಶ್ರದ್ಧಾಭಕ್ತಿಯಿಂದ ಆರಾಧಿಸುತ್ತಿದ್ದರು. ಕ್ಷೇತ್ರದ ನಿರುಪದ್ರವಿ ಮೊಸಳೆಯಿಂದ ಅನಂತಪುರ ದೇವಳವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಗೂ ಕಾರಣವಾಗಿದೆ.
ಈ ವರೆಗೆ ಯಾರೊಬ್ಬರಿಗೂ ಉಪಟಳ ಮಾಡದ ದೇವರ ಮೊಸಳೆ ಎಂದೇ ಪ್ರಸಿದ್ಧವಾಗಿದ್ದ ಈ ಮೊಸಳೆಯು ಇತ್ತೀಚೆಗಿನ ದಿನಗಳಲ್ಲಿ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿತ್ತು. ಈ ನಿಟ್ಟಿನಲ್ಲಿ ವೈದ್ಯರ ಮಾರ್ಗದರ್ಶನದಲ್ಲಿ ಅದಕ್ಕೆ ಚಿಕಿತ್ಸೆಯೂ ನಡೆಯುತ್ತಿತ್ತು.
ಹರಿಪಾದ ಸೇರಿದ ಮೊಸಳೆಯನ್ನು ದೇಗುಲದ ಪದಾಧಿಕಾರಿಗಳ ಸಮ್ಮುಖದಲ್ಲಿ ಭಕ್ತರು ನೀರಿನಿಂದ ಮೇಲಕ್ಕೆತ್ತಿ ಶ್ರೀ ಕ್ಷೇತ್ರದ ಮುಂಭಾಗದಲ್ಲಿ ಇರಿಸಿದ್ದಾರೆ. ಭಕ್ತಜನರು ಅಂತಿಮ ದರ್ಶನ ನೆರವೇರಿಸುತ್ತಿದ್ದಾರೆ. ಸೋಮವಾರ ಬೆಳಗ್ಗೆ ತಂತ್ರಿಗಳ ನೇತೃತ್ವದಲ್ಲಿ ಬಬಿಯಾ ಮೊಸಳೆಯ ಅಂತ್ಯ ವಿಧಿ ವಿಧಾನಗಳು ಜರಗುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!