ರಣರಂಗವಾದ ದ್ವೀಪರಾಷ್ಟ್ರ: ಐವರು ಸಾವು, 180 ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಶ್ರೀಲಂಕಾ ಜನರ ತಾಳ್ಮೆ ಕಟ್ಟೆ ಹೊಡೆದಿದೆ. ಸೋಮವಾರ ನಡೆದ ಗಲಭೆಯಲ್ಲಿ ಸಂಸದ ಸೇರಿದಂತೆ ಐವರು ಸಾವನ್ನಪ್ಪಿದ್ದು, 180 ಮಂದಿ ಗಾಯಗೊಂಡಿದ್ದಾರೆ. ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ಅಧಿಕೃತ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಮಹಿಂದಾ ರಾಜಪಕ್ಸೆ ಅವರ ಅನುಯಾಯಿಗಳು ದಾಳಿ ನಡೆಸಿ ಪ್ರತಿಭಟನಾಕಾರರ ಟೆಂಟ್‌ಗಳು ಮತ್ತು ಫಲಕಗಳನ್ನು ಧ್ವಂಸಗೊಳಿಸಿದರು. ಸಾರ್ವಜನಿಕರ ಆಕ್ರೋಶದ ನಡುವೆಯೇ ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ್ದಾರೆ. ರಾಜಪಕ್ಸೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಹಂಬಂಟೋಟಾದಲ್ಲಿರುವ ರಾಜಪಕ್ಸೆ ಪೂರ್ವಜರ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದರು.

ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದ ಜನ ಶ್ರೀಲಂಕಾದ ಎಂಪಿ ಅಮರಕೀರ್ತ ಕಾರನ್ನು ತಡೆಹಿಡಿದರು. ಈ ವೇಳೆ ಪ್ರತಿಭಟನಾಕಾರರನ್ನು ತಡೆಯಲು ಎಂಪಿ ತನ್ನ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಒಬ್ಬ ಪ್ರತಿಭಟನಾಕಾರ ಸಾವನ್ನಪ್ಪಿ, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾರೆ.

ಎಂಪಿ ನಡವಳಿಕೆಯಿಂದ ರೊಚ್ಚಿಗೆದ್ದ ಜನ ಕಾರನ್ನು ಬೆನ್ನಟ್ಟಿದ್ದಾರೆ. ಭಯಗೊಂಡ ಸಂಸದ ಸಮೀಪದ ಕಟ್ಟಡವೊಂದರಲ್ಲಿ ಅಡಗಿಕೊಂಡಿದ್ದಾರೆ. ಸಾವಿರಾರು ಜನ ಕಟ್ಟಡಕ್ಕೆ ನುಗ್ಗಲು ಯತ್ನಿಸಿದ್ದನ್ನು ಕಂಡ ಸಂಸದ ತನ್ನ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಸಂಸದ ಸೆಕ್ಯುರಿಟಿ ಗಾರ್ಡ್ ಕೂಡ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಆಡಳಿತ ಪಕ್ಷದ ನಾಯಕ ವೀರಕೇಟಿಯು ದಕ್ಷಿಣ ಪಟ್ಟಣದಲ್ಲಿ ಸರ್ಕಾರದ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದರು. ಈ ಸಮರದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಕನಿಷ್ಠ ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!