ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಬಿಡುಗಡೆಯಾಗಲು ಇನ್ನೆರಡು ದಿನ ಬಾಕಿ ಇದ್ದು, ಈ ಸಿನಿಮಾ ಆಂಧ್ರ, ತೆಲಂಗಾಣ ಮಾತ್ರವೇ ಅಲ್ಲದೆ ಕರ್ನಾಟಕ, ಕೇರಳ, ಉತ್ತರ ಭಾರತದ ರಾಜ್ಯಗಳು, ವಿದೇಶಗಳಲ್ಲಿಯೂ ಒಂದೇ ಬಾರಿಗೆ ತೆರೆಗೆ ಬರುತ್ತಿದೆ.
ಅದ್ರಲ್ಲೂ ತೆಲಂಗಾಣ ಹಾಗೂ ಆಂಧ್ರದಿಂದ ಬರುವ ಕಲೆಕ್ಷನ್ ಮೇಲೆ ಸಿನಿಮಾ ತಂಡ ಹೆಚ್ಚು ಆಧಾರವಾಗಿದೆ. ಇದೇ ಕಾರಣಕ್ಕೆ ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ‘ದೇವರ’ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಹಾಗೂ ಹೆಚ್ಚುವರಿ ಶೋ ಹಾಕಲು ಚಿತ್ರತಂಡ ಅನುಮತಿ ಪಡೆದುಕೊಂಡಿತ್ತು.
ಆಂಧ್ರ ಸರ್ಕಾರ, ಹೆಚ್ಚುವರಿ ಶೋಗೆ ಅನುಮತಿ ನೀಡುವ ಜೊತೆಗೆ 14 ದಿನಗಳ ಕಾಲ ಟಿಕೆಟ್ ದರ ಹೆಚ್ಚಿಸಿಕೊಳ್ಳುವಂತೆ ಅನುಮತಿ ನೀಡಿತ್ತು. ಅದರ ಜೊತೆಗೆ ಸಿನಿಮಾ ಬಿಡುಗಡೆ ಆದ ದಿನ ಆರು ಶೋ ಮುಂದಿನ ಒಂಬತ್ತು ದಿನಗಳ ಕಾಲ ಐದು ಶೋಗೆ ಅನುಮತಿ ನೀಡಿತ್ತು. ಅದಾದ ಬಳಿಕ ಈ ಹಿಂದಿನ ದರಗಳಿಗೆ ಸಿನಿಮಾ ಟಿಕೆಟ್ ದರವನ್ನು ತಗ್ಗಿಸುವಂತೆ ಸೂಚಿಸಿತ್ತು.
ಆದರೆ ಆಂಧ್ರ ಸರ್ಕಾರ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿತ್ತು. ಯಾವ ಆಧಾರದಲ್ಲಿ ಟಿಕೆಟ್ ದರ ಹೆಚ್ಚಿಸಲು ಅನುಮತಿ ನೀಡಲಾಗಿದೆಯಂತೆ ಪ್ರಶ್ನಿಸುವ ಜೊತೆಗೆ, ಟಿಕೆಟ್ ದರ ಹೆಚ್ಚಳವು ಸಾಮಾನ್ಯ ವ್ಯಕ್ತಿಗೆ ಮಾಡಲಾಗುತ್ತಿರುವ ಅನ್ಯಾಯ ಎಂದು ಸಹ ಅರ್ಜಿಯಲ್ಲಿ ಹೇಳಲಾಗಿತ್ತು.
ಇದೀಗ ಅರ್ಜಿಯ ತ್ವರಿತ ವಿಚಾರಣೆ ನಡೆಸಿರುವ ಆಂಧ್ರ ಹೈಕೋರ್ಟ್, 14 ದಿನಗಳ ಬದಲಿಗೆ ಕೇವಲ 10 ದಿನಗಳ ವರೆಗೆ ಮಾತ್ರವೇ ಟಿಕೆಟ್ ದರ ಹೆಚ್ಚಿಸಿಕೊಳ್ಳುವಂತೆ ‘ದೇವರ’ ಚಿತ್ರತಂಡಕ್ಕೆ ಸೂಚಿಸಿದೆ. ಆಂಧ್ರದ ಸಿನಿಮಾಟೊಗ್ರಫಿ ಕಾಯ್ದೆಯ ಅನುಸಾರ 100 ಕೋಟಿಗೂ ಹೆಚ್ಚು ಬಜೆಟ್ ಇರುವ ಸಿನಿಮಾಗಳಿಗೆ ಮೊದಲ 10 ದಿನ ಟಿಕೆಟ್ ಹೆಚ್ಚಿಸಿಕೊಳ್ಳಲು ಅನುಮತಿ ಇದೆ. ಆದರೆ ಈ ನಿಯಮವನ್ನು ಉಲ್ಲಂಘಿಸಿ 14 ದಿನಗಳ ಕಾಲ ಅನುಮತಿ ನೀಡಲಾಗಿತ್ತು. ಸರ್ಕಾರ ನೀಡಿದ್ದ 14 ದಿನಗಳ ಆದೇಶವನ್ನು ರದ್ದು ಪಡಿಸಿರುವ ಹೈಕೋರ್ಟ್, 10 ದಿನಗಳ ಕಾಲ ಮಾತ್ರವೇ ಅವಕಾಶ ನೀಡಿದೆ.