ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಬದ್ಲಾಪುರ ಲೈಂಗಿಕ ದೌರ್ಜನ್ಯ ಆರೋಪಿ ಅಕ್ಷಯ್ ಶಿಂಧೆಯ ಕಸ್ಟಡಿ ಸಾವಿನ ಕುರಿತು ಪೊಲೀಸರನ್ನು ಬಾಂಬೆ ಹೈಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರ ವಿಭಾಗೀಯ ಪೀಠವು ಈ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ, ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಕಂಡುಬಂದರೆ, ಸೂಕ್ತ ಆದೇಶಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ಅಕ್ಷಯ್ ಶಿಂಧೆ ಅವರನ್ನು ಮೊದಲು ಹಿಡಿಯಲು ಪೊಲೀಸರು ಏಕೆ ಪ್ರಯತ್ನಿಸಲಿಲ್ಲ? ಇದರಿಂದ ಶೂಟೌಟ್ ಅನ್ನು ತಪ್ಪಿಸಬಹುದಿತ್ತು. ಮೊದಲು ಕಾಲು ಅಥವಾ ತೋಳುಗಳಿಗೆ ಗುಂಡು ಹಾರಿಸುವ ಬದಲು ಆರೋಪಿಯ ತಲೆಗೆ ನೇರವಾಗಿ ಗುಂಡು ಹಾರಿಸಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ.
ಅವನು ಮೊದಲು ಟ್ರಿಗರ್ ಎಳೆದ ಕ್ಷಣದಲ್ಲಿ ಇತರರು ಅವನನ್ನು ಸುಲಭವಾಗಿ ಹಿಡಿದು ಬೀಳಿಸಬಹುದಿತ್ತು. ಆತನೇನೂ ಗಟ್ಟಿಮುಟ್ಟಾದ ಅಥವಾ ಶಕ್ತಿಶಾಲಿ ವ್ಯಕ್ತಿ ಅಲ್ಲ. ಇದನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟ. ಇದನ್ನು ಎನ್‌ಕೌಂಟರ್ ಎಂದು ಕರೆಯಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಪೃಥ್ವಿರಾಜ್ ಚವಾಣ್ ಹೇಳಿದ್ದಾರೆ.
ಅಕ್ಷಯ್ ಶಿಂಧೆ ಅವರ ತಂದೆ ಅಣ್ಣಾ ಶಿಂಧೆ ಅವರು ಮಂಗಳವಾರ ಬಾಂಬೆ ಹೈಕೋರ್ಟ್‌ಗೆ ವಕೀಲ ಅಮಿತ್ ಕತ್ರನ್ವಾರೆ ಮೂಲಕ ಅರ್ಜಿ ಸಲ್ಲಿಸಿದ್ದು, ತಮ್ಮ ಮಗನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ ಎಂದು ಆರೋಪಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಗೆ ಒತ್ತಾಯಿಸಿದ್ದಾರೆ.
ವಿಚಾರಣೆಯ ಸಂದರ್ಭ, ದೈಹಿಕವಾಗಿ ದುರ್ಬಲ ವ್ಯಕ್ತಿಯಿಂದ ರಿವಾಲ್ವರ್ ಅನ್ನು ತ್ವರಿತವಾಗಿ ಅನ್ಲಾಕ್ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಗೆ ಹೇಳಿದೆ.
ಅಧಿಕಾರಿಯ ಪಿಸ್ತೂಲ್ ಅನ್ನು ಅನ್‌ಲಾಕ್ ಮಾಡಲಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ತಿಳಿಸಿದರು. ಅದಕ್ಕೆ ನ್ಯಾಯಮೂರ್ತಿ ಚವಾಣ್, ಇದನ್ನು ನಂಬುವುದು ಕಷ್ಟ. ಮೇಲ್ನೋಟಕ್ಕೆ ಸಮಸ್ಯೆಗಳಿವೆ ಎಂದು ತೋರುತ್ತದೆ. ಸಾಮಾನ್ಯ ವ್ಯಕ್ತಿ ಪಿಸ್ತೂಲ್‌ನಿಂದ ಗುಂಡು ಹಾರಿಸುವಂತಿಲ್ಲ ಏಕೆಂದರೆ ಅದಕ್ಕೆ ಶಕ್ತಿ ಬೇಕು. ದೈಹಿಕವಾಗಿ ದುರ್ಬಲ ವ್ಯಕ್ತಿಯಿಂದ ರಿವಾಲ್ವರ್ ಅನ್ನು ತ್ವರಿತವಾಗಿ ಅನ್ಲಾಕ್ ಮಾಡಲು ಸಾಧ್ಯವಿಲ್ಲ. ಇದು ತುಂಬಾ ಸುಲಭವಲ್ಲ ಎಂದಿದ್ದಾರೆ.
ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ಕೋರಿ ಅಕ್ಷಯ್ ಶಿಂಧೆ ಅವರ ತಂದೆ ಸಲ್ಲಿಸಿದ ದೂರಿನ ಕುರಿತು ಪೊಲೀಸರು ನಿರ್ಧಾರ ತೆಗೆದುಕೊಳ್ಳಬೇಕಾದಾಗ ಪೀಠವು ಅಕ್ಟೋಬರ್ 3 ರಂದು ಹೆಚ್ಚಿನ ವಿಚಾರಣೆಗೆ ಮುಂದೂಡಿದೆ.