October 29, 2026
Thursday, October 29, 2026
spot_img

ಚಂಡಮಾರುತಕ್ಕೆ ತತ್ತರಿಸಿದ ಆಂಧ್ರ: ನೆರೆ ಪೀಡಿತ ಪ್ರದೇಶಗಳಿಗೆ ಸಿಎಂ ಚಂದ್ರಬಾಬು ನಾಯ್ಡು ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಇಂದು ‘ಅರ್ನಬ್’ ಚಂಡಮಾರುತದಿಂದ ತತ್ತರಿಸಿರುವ ಕರಾವಳಿ ಜಿಲ್ಲೆಗಳಿಗೆ ಖುದ್ದಾಗಿ ಭೇಟಿ ನೀಡಿ, ನೆರೆ ಹಾಗೂ ಬೆಳೆ ಹಾನಿಯ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಅವರು, ಸಂತ್ರಸ್ತರಿಗೆ ತಕ್ಷಣದ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವೈಮಾನಿಕ ವೀಕ್ಷಣೆ

 ಮುಖ್ಯಮಂತ್ರಿಯವರು ಕೃಷ್ಣಾ, ಪಶ್ಚಿಮ ಗೋದಾವರಿ ಮತ್ತು ಕೊನಸೀಮಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ನೀರಿನಲ್ಲಿ ಮುಳುಗಿರುವ ಕೃಷಿ ಭೂಮಿಯನ್ನು ಹೆಲಿಕಾಪ್ಟರ್ ಮೂಲಕ ವೀಕ್ಷಿಸಿದರು. ನಿಮ್ಮಕೂರು, ಪಾಮರ್ರು, ಬಂಟುಮಿಲ್ಲಿ, ನರಸಾಪುರಂ, ಪಾಲಕಲ್ಲು, ಅಮಲಾಪುರಂ ಮತ್ತು ಕಟ್ರೆನಿಕೋನಾ ಭಾಗಗಳಲ್ಲಿ ಉಂಟಾಗಿರುವ ಬೆಳೆ ಹಾನಿಯನ್ನು ಅವರು ಪರಿಶೀಲಿಸಿದರು. ವೆಟ್ಲಪಾಲಂ ಎಂಬಲ್ಲಿಗೆ ಭೇಟಿ ನೀಡಿ ಸಂಕಷ್ಟದಲ್ಲಿರುವ ರೈತರೊಂದಿಗೆ ಖುದ್ದಾಗಿ ಮಾತನಾಡಿ, ಅವರ ಅಹವಾಲುಗಳನ್ನು ಆಲಿಸಿದರು.

ಪುನರ್ವಸತಿ ಕೇಂದ್ರಗಳಿಗೆ ಭೇಟಿ

ಗಚಕಾಯಲಪೋರಾದಲ್ಲಿ ಸ್ಥಾಪಿಸಲಾಗಿರುವ ಸಂತ್ರಸ್ತರ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ನೀಡಲಾಗುತ್ತಿರುವ ಆಹಾರದ ಗುಣಮಟ್ಟ, ವೈದ್ಯಕೀಯ ಸೌಲಭ್ಯ ಹಾಗೂ ಅಗತ್ಯ ನೆರವುಗಳನ್ನು ಸಿಎಂ ಚಂದ್ರಬಾಬು ನಾಯ್ಡು ಪರಿಶೀಲಿಸಿದರು.

 ಸರ್ಕಾರದ ಮಹತ್ವದ ಪರಿಹಾರ ಘೋಷಣೆಗಳು

ಚಂಡಮಾರುತದಿಂದ ತೊಂದರೆಗೊಳಗಾದ ಜನರಿಗೆ ಆಂಧ್ರ ಸರ್ಕಾರವು ಈ ಕೆಳಗಿನ ನೆರವನ್ನು ಪ್ರಕಟಿಸಿದೆ. ಚಂಡಮಾರುತಕ್ಕೆ ಸಿಲುಕಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಲಾಗಿದೆ. ಸಂತ್ರಸ್ತ ಕುಟುಂಬಗಳ ಪ್ರತಿ ವ್ಯಕ್ತಿಗೆ 1,000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗುವುದು. ನೆರೆ ಪೀಡಿತ ಕುಟುಂಬಗಳಿಗೆ 25 ಕೆಜಿ ಅಕ್ಕಿ ವಿತರಣೆ ಮಾಡಲಾಗುವುದು. ನೇಕಾರರು ಮತ್ತು ಮೀನುಗಾರರ ಕುಟುಂಬಗಳಿಗೆ 50 ಕೆಜಿ ಅಕ್ಕಿ, ತಲಾ ಒಂದು ಕೆಜಿ ಈರುಳ್ಳಿ, ಅಡುಗೆ ಎಣ್ಣೆ ಹಾಗೂ ತೊಗರಿ ಬೇಳೆ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಕೇಂದ್ರ ಸರ್ಕಾರದ ನೆರವಿಗೆ ಪತ್ರ

ಚಂಡಮಾರುತದ ತೀವ್ರತೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಾಹಿತಿ ನೀಡಿರುವ ಮುಖ್ಯಮಂತ್ರಿಗಳು, ಪ್ರಾಥಮಿಕ ಹಾನಿಯ ವರದಿಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಆರ್ಥಿಕ ನೆರವಿಗಾಗಿ ಪತ್ರ ಬರೆದಿದ್ದಾರೆ. ತೆಂಗು ಸೇರಿದಂತೆ ತೋಟಗಾರಿಕಾ ಮತ್ತು ಕೃಷಿ ಬೆಳೆಗಳ ನಷ್ಟದ ಸಂಪೂರ್ಣ ವರದಿಯನ್ನು ಶೀಘ್ರದಲ್ಲೇ ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ನಾಯ್ಡು ತಿಳಿಸಿದ್ದಾರೆ.

Must Read

Skip to toolbar