ʼಅನೇಕ್‌ʼ ಟ್ರೇಲರ್‌ ಬಿಡುಗಡೆ : ಭಾರತೀಯರಾಗುವುದು ಯಾವಾಗ? ಎಂದು ಕೇಳಿದ ಆಯುಷ್ಮಾನ್‌ ಖುರಾನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
“ನಿಮ್ಮ ರಾಜ್ಯಯಾವುದು?” ಎಂದು ಸಹವರ್ತಿಯೊಬ್ಬರಿಗೆ ಆಯುಷ್ಮಾನ್‌ ಖುರಾನಾ ಕೇಳುತ್ತಾರೆ. ಅದಕ್ಕೆ ಆತ “ತೆಲಂಗಾಣ” ಎನ್ನುತ್ತಾನೆ. “ಓಹ್‌ ಅಂದರೆ ನೀನೊಬ್ಬ ಸೌಥ್‌ ಇಂಡಿಯನ್” ಎಂಬುದಕ್ಕೆ ಆತ ಹೌದು ಎನ್ನುತ್ತಾನೆ. ಅದಕ್ಕೆ ಖುರಾನಾ “ಅದುಹೇಗೆ ಸೌಥ್‌ ಇಂಡಿಯನ್‌ ಆಗುತ್ತದೆ. ತೆಲಂಗಾಣವು ಆಂಧ್ರಪ್ರದೇಶದ ಉತ್ತರದಲ್ಲಿದೆ. ಅಂದ ಮೇಲೆ ಆಂಧ್ರ ಪ್ರದೇಶದ ಜನರು ತೆಲಂಗಾಣದವರಿಗೆ ನಾರ್ಥ್‌ ಇಂಡಿಯನ್‌ ಅನ್ನಬೇಕಲ್ಲವೇ?” ಎಂದು ಖುರಾನಾ ಪ್ರಶ್ನಿಸುತ್ತಾರೆ.

ಅದಕ್ಕೆ ಎದುರಿಗಿರುವ ವ್ಯಕ್ತಿ “ಇಲ್ಲ ಅದು ಹಾಗಲ್ಲ” ಎನ್ನುತ್ತಾನೆ. “ಹಾಗಾದರೆ ನಾನು ಯಾವ ರಾಜ್ಯದವ್ನು ಎಂದೆನಿಸುತ್ತದೆ?” ಎಂಬ ಪ್ರಶ್ನೆಗೆ ಎದುರಿಗಿರುವವ “ನಾರ್ಥ್‌ ಇಂಡಿಯನ್‌ ಏಕೆಂದರೆ ನಿಮ್ಮ ಹಿಂದಿ ಸ್ಪಷ್ಟವಾಗಿದೆ” ಎನ್ನುತ್ತಾನೆ. ಅದಕ್ಕೆ ಖುರಾನಾ “ಅಂದ್ರೆ ಸ್ಪಷ್ಟವಾಗಿ ಹಿಂದಿ ಮಾತಾಡುವವರೆಲ್ಲ ನಾರ್ಥ ಇಂಡಿಯನ್‌ ಗಳಾ?” ಎಂದು ಖುರಾನಾ ಪ್ರಶ್ನಿಸಿದ್ದಕ್ಕೆ ಆತ ಇಲ್ಲವೆನ್ನುತ್ತಾನೆ “ಹಾಗಾದರೆ ಭಾಷೆಯೂ ಅಲ್ಲವೆಂದ ಮೇಲೆ ಅವನು ನಾರ್ಥ್‌ ಇವನು ಸೌಥ್‌ ಎಂದು ಹೇಗೆ ನಿರ್ಧಾರವಾಗುತ್ತದೆ? ನಾರ್ಥ್‌ ಇಂಡಿಯನ್, ಸೌಥ್‌ ಇಂಡಿಯನ್‌ , ಈಸ್ಟ್‌ ಇಂಡಿಯನ್‌, ವೆಸ್ಟ್‌ ಇಂಡಿಯನ್‌ ಇವುಗಳನ್ನೆಲ್ಲ ಬಿಟ್ಟು ಕೇವಲ ಇಂಡಿಯನ್‌ ಆಗುವುದು ಯಾವಾಗ?” ಎಂದು ಮಾರ್ಮಿಕವಾಗಿ ಖುರಾನಾ ಕೇಳುತ್ತಾರೆ. ಹೌದಲ್ಲವಾ? ಒಂದೇ ದೇಶದಲ್ಲಿದ್ದುಕೊಂಡು ಈ ಭೇದ ಭಾವವೇಕೆ? ಎಂದು ನೋಡುಗನಲ್ಲಿ ಸಹಜವಾಗಿಯೇ ಜಿಜ್ಞಾಸೆ ಹುಟ್ಟಿಕೊಳ್ಳುತ್ತದೆ. ಇತ್ತೀಚೆಗೆ ಬಿಡುಗಡೆಯಾಗಿರುವ ʼಅನೇಕ್‌ʼ ಚಿತ್ರದ ಟ್ರೇಲರ್‌ ನ ಒಂದು ಝಲಕ್‌ ಇದು.

ನಿನ್ನೆಯಷ್ಟೇ ಬಿಡುಗಡೆಯಾದ ಈ ಚಿತ್ರದ ಟ್ರೇಲರ್‌ ಸೋಷಿಯಲ್‌ ಮೀಡಿಯಾಗಳಲ್ಲಿ ಸಖತ್‌ ಸದ್ದು ಮಾಡುತ್ತಿದೆ. ವಿಕ್ಕಿ ಡೋನರ್‌, ಶುಭ್‌ ಮಂಗಲ್‌ ಸಾವಧಾನ್‌, ಆರ್ಟಿಕಲ್15‌ ಹೀಗೇ ಸದಾ ಒಂದಿಲ್ಲೊಂದು ಸಾಮಾಜಿಕ ಸಮಸ್ಯೆಗಳನ್ನು ಪ್ರಶ್ನಿಸಿ ಜಾಗೃತಿ ಮೂಡಿಸುವಂತಹ ಚಿತ್ರಗಳಲ್ಲೇ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್‌ನ ಅಯುಷ್ಮಾನ್‌ ಖುರಾನಾ ಈ ಚಿತ್ರದಲ್ಲಿ ಸೀಕ್ರೇಟ್‌ ಕಾಪ್‌ ಆಗಿ ಪಾತ್ರನಿರ್ವಹಿಸಿದ್ದಾರೆ. ದೇಶದ ಆಂತರಿಕ ಸುರಕ್ಷೆಯ ರಕ್ಷಣೆಯ ಸಲುವಾಗಿ ಈಶಾನ್ಯ ರಾಜ್ಯಗಳಲ್ಲಿನ ಉಗ್ರವಾದವಾನ್ನು ಸದೆಬಡಿಯುವ ʼಮಿಷನ್‌ʼ ಒಂದರ ಮೇಲೆ ಈಶಾನ್ಯ ಭಾರತಕ್ಕೆ ಹೋಗುವ ಹೀರೋ ಅಲ್ಲಿನ ಜ್ವಲಂತ ಸಮಸ್ಯೆಗಳನ್ನು ಬಿಚ್ಚಿಡುತ್ತಾರೆ.

ಭಾರತದೊಂದಿಗೇ ಇದ್ದರೂ ಈಶಾನ್ಯ ಭಾರತದಲ್ಲಿ ಏಕೆ ಪ್ರತ್ಯೇಕತೆಯ ಕೂಗು? ಅಲ್ಲಿನ ಜನರನ್ನು ಯಾಕೆ ಇತರರು ಭಾರತೀಯರೆಂದು ಸ್ವೀಕರಿಸುವುದಿಲ್ಲ? ಸರ್ಕಾರಗಳ್ಯಾಕೆ ಸುಮ್ಮನೆ ಕೂತಿವೆ? ಈಶಾನ್ಯ ಭಾರತದ ನಿಜವಾದ ಸಮಸ್ಯೆಯೇನು? ಎಲ್ಲರೂ ಭಾರತೀಯರಾಗುವುದು ಯಾವಾಗ? ಎಂಬೆಲ್ಲ ಪ್ರಶ್ನೆಗಳಿಗೆ ಹೀರೋ ಉತ್ತರ ಕಂಡುಕೊಳ್ಳುತ್ತಾನಾ? ಅಥವಾ ಹೀರೋ ಮೂಲಕ ಪ್ರೇಕ್ಷಕರಿಗೆ ಉತ್ತರ ಸಿಗುತ್ತದಾ? ಎಂಬುದು ಸಿನೆಮಾದ ಕಥಾ ಹಂದರ ಎಂಬುದನ್ನು ಟ್ರೇಲರ್‌ ಸ್ಪಷ್ಟವಾಗಿ ಬಿಚ್ಚಿಡುತ್ತದೆ.

ಅನುಭವ್‌ ಸಿನ್ಹಾ ನಿರ್ದೇಶಿಸಿರುವ ಈ ಚಿತ್ರಕ್ಕೆ ಈಗಾಗಲೇ ಭರ್ಜರಿ ರೆಸ್ಪಾನ್ಸ್‌ ದೊರೆತಿದ್ದು ಲವ್‌ ಸ್ಟೋರಿ, ಫ್ಯಾಮಿಲಿ ಡ್ರಾಮಾಗಳ ಮಧ್ಯೆ ಭಾರತೀಯತೆಯ ಬಗ್ಗೆ ಹೇಳುವ ಪೊಲಿಟಿಕಲ್‌ ಡ್ರಾಮಾ ಮತ್ತು ಅಕ್ಷನ್‌ ಥ್ರಿಲ್ಲರ್‌ ಆಗಿರುವ ಈ ಸಿನೆಮಾವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!