ಹೊಸದಿಗಂತ ವರದಿ ರಾಮನಗರ :
ತೇಗದ ಮರಗಳನ್ನು ಕಡಿದು ಸಾಗಣೆ ಮಾಡಲು ಅನುಮತಿ ನೀಡಲು 30 ಸಾವಿರ ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆಯ ರಾಮನಗರ ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ರಾಜಶೇಖರಯ್ಯ ಎಂಬಾತನನ್ನು ಜಿಲ್ಲಾ ಲೋಕಾಯುಕ್ತ ಪೊಲೀಸರು ಹಣದ ಸಮೇತ ಬುಧವಾರ ರಾತ್ರಿ ಬಂಧಿಸಿದ್ದಾರೆ.
ಇಲ್ಲಿನ ವಾರ್ಡ್-21ರ ಕೊತ್ತಿಪುರದ ಸಂತೋಷ್ ಎಂಬುವರು ತೇಗದ ಮರಗಳನ್ನು ಕಡಿಯುವುದಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಲೇವಾರಿ ಮಾಡದೆ ಹಾಗೆಯೇ ಉಳಿಸಿಕೊಂಡಿದ್ದ ರಾಜಶೇಖರಯ್ಯ, ಅನುಮತಿ ನೀಡಲು 40 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ. ಕಡೆಗೆ 30 ಸಾವಿರ ಕೊಟ್ಟರಷ್ಟೇ ಅನುಮತಿ ನೀಡುವುದಾಗಿ ಹೇಳಿದ್ದ ಎಂದು ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಲೋಕಾಯುಕ್ತ ಅಧೀಕ್ಷಕಿ ಸ್ನೇಹ ಪಿ.ವಿ ಮಾಹಿತಿ ನೀಡಿದರು.
ಅನುಮತಿಗಾಗಿ ಕಚೇರಿಗೆ ಅಲೆದು ಬೇಸತ್ತ ಸಂತೋಷ್ ಅವರು ರಾಜಶೇಖರಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದರು. ಪ್ರಕರಣ ದಾಖಲಾದ ಕೆಲವೇ ಹೊತ್ತಿನಲ್ಲಿ ಡಿಆರ್‌ಎಫ್‌ಒ ರಾತ್ರಿ 7.30ರ ಸುಮಾರಿಗೆ ಎಸ್‌ಪಿ ಕಚೇರಿ ವೃತ್ತದಲ್ಲಿರುವ ಹೋಟೆಲ್‌ನಲ್ಲಿ ದೂರುದಾರರಿಂದ 30 ಸಾವಿರ ತರುವಂತೆ ಸೂಚಿಸಿದ್ದ. ಹೋಟೆಲ್‌ನಲ್ಲಿ ಲಂಚ ಪಡೆಯುವಾಗ, ನಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಣದ ಸಮೇತ ರಾಜಶೇಖರಯ್ಯನನ್ನು ಬಂಧಿಸಿದರು ಎಂದು ತಿಳಿಸಿದರು.
ಡಿವೈಎಸ್ಪಿಗಳಾದ ಶಿವಪ್ರಸಾದ್, ರಾಜೇಶ್ ಮೇಲ್ವಿಚಾರಣೆಯಲ್ಲಿ ಇನ್‌ಸ್ಪೆಕ್ಟರ್‌ಗಳಾದ ಸಂದೀಪ್ ಕುಮಾರ್ ಬಿ.ಎನ್, ವಿಜಯಕುಮಾರ್ ಹಾಗೂ ಸಿಬ್ಬಂದಿ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ಎಂದರು.



