ಸತ್ತ ಮರಿಯ ಕಳೆಬರಹ ಹೊತ್ತು ಸಾಗಿದ ತಾಯಾನೆ: ಮನಕಲಕುತ್ತೆ ಈ ವಿಡಿಯೋ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹೆತ್ತ ತಾಯಿ ತಾನು ಜನ್ಮ ನೀಡಿದ ಮಕ್ಕಳಿಗೆ ಏನೇ ಅಪಾಯವಾದರೂ ಸಹಿಸುವುದಿಲ್ಲ. ತಾಯಿ- ಮಗುವಿನ ಕರಳಿನ ಬಂಧ ಅಂತಹದ್ದು. ತಾಯಿ ಮಮತೆಗೆ ಸರಿಸಾಟಿಯಾದ ಇನ್ನೊಂದು ಪ್ರೀತಿ ಇಡೀ ಜಗತ್ತಿನಲ್ಲಿ ಬೇರೆ ಇನ್ಯಾವುದೂ ಇಲ್ಲ. ಅದರಲ್ಲಿಯೂ ವನ್ಯಜೀವಿಗಳು ತಮ್ಮ ಕರುಳಬಳ್ಳಿಯ ಮೇಲೆ ಅಪಾರವಾದ ಪ್ರೀತಿ, ವಾತ್ಸಲ್ಯ ಹಾಗೂ ಮಮತೆ ಹೊತ್ತಿರುತ್ತವೆ. ತಮ್ಮ ಮರಿಗಳಿಗೆ ಸಣ್ಣ ತೊಂದರೆಯುಂಟಾದರೂ ಅವು ಸಹಿಸಲಾರವು. ಮೂಕಪ್ರಾಣಿಗಳ ನಡುವಿನ ಬಾಂಧವ್ಯ, ಕುಟುಂಬ ಸದಸ್ಯರನ್ನು ಕಳೆದುಕೊಂಡಾಗ ಅವು ಪಡುವ ಯಾತನೆ, ಅನುಭವಿಸುವ ಸಂಕಟಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ಪಶ್ಚಿಮ ಬಂಗಾಳದಲ್ಲಿ ಘಟನೆಯೊಂದು ನಡೆದಿದೆ.
ಆಕಸ್ಮಿಕವಾಗಿ ಸಾವನ್ನಪ್ಪಿದ ತನ್ನ ಪುಟ್ಟ ಮರಿಯ ಅಗಲಿಕೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗದ ತಾಯಾನೆ ಅದೇ ನೋವಿನಲ್ಲಿ ಏಳು ಕಿಲೋಮೀಟರ್‌ ಗಳಿಗೂ ಹೆಚ್ಚಿನ ದೂರ ಮರಿಯಾನೆಯ ಕಳೆಬರಹವನ್ನು ಸೊಂಡಿಲಿನಲ್ಲಿ ಹೊತ್ತು ಸಾಗಿದ ಮನಕಲಕುವ ಘಟನೆ ವರದಿಯಾಗಿದೆ. ಜಲ್ಪೈಗುರಿ ಜಿಲ್ಲೆಯ ಬನಾರ್ಹತ್ ಸಮೀಪದ ದೂರರ್ ಪ್ರದೇಶದ ಚುನಾಭಟಿ ಚಹಾ ತೋಟದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದಾಗ  ಮರಿಯಾನೆ ಮೃತಪಟ್ಟಿದೆ. ತಾಯಾನೆ ಮರಿಯನ್ನು ಸೊಂಡಿಲಿನಲ್ಲಿ ಎತ್ತಿಕೊಂಡು ಎತ್ತಿಕೊಂಡು ಮೂರು ಚಹಾ ತೋಟಗಳನ್ನು ದಾಟಿ ಏಳು ಕಿಮಿ ದೂರ ಕ್ರಮಿಸಿದೆ. ಸುಮಾರು 30 ರಿಂದ 35 ರಷ್ಟಿದ್ದ ಉಳಿದ ಆನೆಗಳ ಗುಂಪು ತಾಯಾನೆಯನ್ನು ಮೂಕವಾಗಿ ಹಿಂಬಾಲಿಸಿವೆ. ಆ ಬಳಿಕ ತೋಟವೊಂದರ ಪೊದೆಯೊಳಗೆ ಮರಿಯ ಕಳೆಬರಹವನ್ನಿರಿಸಿ ಮುಂದೆ ಸಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಆನೆಗಳ ಸಂಚಾರ ಸ್ಥಳೀಯ ನಿವಾಸಿಗಳನ್ನು ಭೀತಿ ಮೂಡಿಸಿದೆ. ಅರಣ್ಯ ಸಿಬ್ಬಂದಿಗಳು ಸ್ಥಳದಲ್ಲಿದ್ದು, ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!