ಅಂಕೋಲಾ: ಏಕಾತ್ಮತಾ ಪಾದಯಾತ್ರೆಗೆ ಭವ್ಯ ಸ್ವಾಗತ

ಹೊಸದಿಗಂತ ವರದಿ, ಅಂಕೋಲಾ:
ಕಾಶಿಯಿಂದ ಬಂದಿರುವ ವೈಶ್ಯ ಗುರುಪರಂಪರೆಯನ್ನು ಗತವೈಭವಕ್ಕೆ ತರುವ ಮಹದ್ದುದ್ದೇಶದೊಂದಿಗೆ ಕಾಶಿಯಲ್ಲಿ ಮೂಲ ಮಠ ಸ್ಥಾಪನೆ ಮತ್ತು ಸಮಾಜದಲ್ಲಿ ಐಕ್ಯತೆ-ಆಧ್ಯಾತ್ಮಿಕತೆಯ ಜಾಗೃತಿಗಾಗಿ ಶಾಂಕರ ಏಕಾತ್ಮತಾ ಪಾದಯಾತ್ರೆ ಕೈಗೊಂಡಿರುವುದಾಗಿ ಹಳದಿಪುರ ಶ್ರೀ ಶಾಂತಾಶ್ರಮದ ಶ್ರೀ ವಾಮನಾಶ್ರಮ ಸ್ವಾಮೀಜಿ ಹೇಳಿದರು.
ಇಲ್ಲಿಯ ಕಾಕರಮಠದ ಶ್ರೀ ವಿಠ್ಠಲ ಸದಾಶಿವ ದೇವಸ್ಥಾನದ ಆವಾರದಲ್ಲಿ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು. ಮಠದ ಎಲ್ಲ ದಾಖಲೆ ಪರಿಶೀಲನೆ ಮಾಡಿದರೆ ಹಳದಿಪುರದ ವೈಶ್ಯ ಸಮಾಜದ ಮಠ ಕಾಶಿಯಿಂದ ಬಂದಿದ್ದು. ಕಾಶಿಯಲ್ಲಿ ಮೊಘಲರ ದಬ್ಬಾಳಿಕೆ ಹೆಚ್ಚಿದಾಗ ಆಗಿನ ಗುರುಗಳು ಶಿವನ ಆರಾಧನೆಗಾಗಿ ಗೋಕರ್ಣಕ್ಕೆ ಬಂದಿದ್ದು, ಕೆಳದಿ ಅರಸರು ಗುರುಗಳ ಆಧ್ಯಾತ್ಮಿಕತೆಗೆ ಮನಸೋತು ಹಳದಿಪುರದಲ್ಲಿ ಜಾಗ ನೀಡಿರುವ ದಾಖಲೆ ಇದೆ. ಇದನ್ನು ಶೃಂಗೇರಿ ಗುರುಗಳೂ ದೃಢಪಡಿಸಿದ್ದಾರೆ. ಕಾಶಿಯ ಮೂಲ ಮಠದ ಪುನರುಜ್ಜೀವನದೊಂದಿಗೆ ಸಮಾಜಕ್ಕೆ ಶಕ್ತಿ ತುಂಬುವುದು ಪಾದಯಾತ್ರೆ ಉದ್ದೇಶ ಎಂದು ಶ್ರೀಗಳು ಹೇಳಿದ್ದಾರೆ.
ಸ್ವಾಗತ ಸಮಿತಿ ವತಿಯಿಂದ ಗೌರವಾಧ್ಯಕ್ಷ ಕೃಷ್ಣಾನಂದ ಶೆಟ್ಟಿ, ಉಪಾಧ್ಯಕ್ಷ ಗಣೇಶ ಶೆಟ್ಟಿ, ಕಾರ್ಯದರ್ಶಿ ಗಣಪತಿ ಹನುಮಂತ ಶೆಟ್ಟಿ ಮತ್ತಿತರರು, ವಿಠ್ಠಲ ಸದಾಶಿವ ದೇವಸ್ಥಾನದಿಂದ ಅಧ್ಯಕ್ಷ ಗಣಪತಿ ಓನಂ ಶೆಟ್ಟಿ ಮತ್ತಿತರರು ಶ್ರೀಗಳಿಗೆ ಗೌರವಾರ್ಪಣೆ ನಡೆಸಿದರು.
ಇದಕ್ಕೂ ಮೊದಲು ಗೋಕರ್ಣದಿಂದ ಬಂದ ಶ್ರೀಗಳನ್ನು ಮೀನುಗಾರ ಸಮಾಜದವರು ಸ್ವಾಗತಿಸಿ ದೋಣಿ ಮೂಲಕ ಮಂಜುಗುಣಿಗೆ ಬರಮಾಡಿಕೊಂಡರು. ನಂತರ ಪಾದಯಾತ್ರೆಯಲ್ಲಿ ಬಂದ ಶ್ರೀಗಳನ್ನು ಅಂಕೋಲಾ ಗಣಪತಿ ದೇವಸ್ಥಾನದ ಬಳಿ ಸ್ವಾಗತಿಸಲಾಯಿತು. ಅಲ್ಲಿಂದ ಮತ್ತೆ ಪಾದಯಾತ್ರೆ ಮೂಲಕ ವಿಠ್ಠಲ ಸದಾಶಿವ ದೇವಸ್ಥಾನಕ್ಕೆ ಬಂದರು. ಈ ಪಾದಯಾತ್ರೆ ವಿಜಯ ದಶಮಿಯಿಂದ ಕೇರಳದ ಕೊಚ್ಚಿ ಸಮೀಪದ ಕಾಲಡಿಯಿಂದ ಪ್ರಾರಂಭವಾಗಿದ್ದು ಅಕ್ಷಯ ತೃತೀಯದಂದು ಏ.23 ರಂದು ಕಾಶಿಯಲ್ಲಿ ಸಂಪನ್ನಗೊಳ್ಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!