ಹೊಸದಿಗಂತ ವರದಿ, ಅಂಕೋಲಾ:
ಸತತ ಮೂರು ದಿನಗಳ ಕಾಲ ನಿರಂತರವಾಗಿ ಸುರಿದು ಜನರಲ್ಲಿ ಭೀತಿ ಹುಟ್ಟಿಸಿದ ಅರಿದ್ರಾ ಮಳೆಯ ನಿರ್ಗಮನದೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು ಶಾಂತ ಸ್ವರೂಪದಲ್ಲಿ ಪುನರ್ವಸು ಮಳೆಯ
ಪ್ರವೇಶವಾಗಿದೆ.
ಮೂರು ದಿನಗಳ ಕಾಲ ಸುರಿದ ಮಳೆಯ ಅಬ್ಬರದಿಂದಾಗಿ ಜಿಲ್ಲೆಯ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಹಲವಾರು ಕಡೆ ನೀರು ತುಂಬಿ ಜಮೀನುಗಳು, ಕೃಷಿ ಭೂಮಿಗಳು ಜಲಾವೃತಗೊಂಡಿದ್ದವು, ಕೆಲವಡೆ ಮನೆ ಅಂಗಡಿಗಳಿಗೆ ನೀರು ತುಂಬಿದ ಘಟನೆ ಸಹ ಸಂಭವಿಸಿತ್ತು.
ಮಳೆಯ ಕಾರಣ ಅಲ್ಲಲ್ಲಿ ಗುಡ್ಡ ಕುಸಿತ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ನೀರು ತುಂಬಿಕೊಂಡ ಘಟನೆಗಳು ನಡೆದು ಜಿಲ್ಲೆಯ ಪ್ರಮುಖ ನದಿಗಳು ತುಂಬಿ ಹರಿಯುವ ಮೂಲಕ ಜನರಲ್ಲಿ ನೆರೆಯ ಭೀತಿ ಆವರಿಸಿತ್ತು, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದ ವತಿಯಿಂದ ಶಾಲಾ ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿತ್ತು.
ಆದರೆ ಇದೀಗ ಮಳೆಯ ಅಬ್ಬರ ಕಡಿಮೆಯಾಗಿದ್ದು ಹೊಲ ಗದ್ದೆಗಳಲ್ಲಿ ನಿಂತ ನೀರು ಇಳಿಮುಖವಾಗಿದ್ದು ನದಿ ಪಾತ್ರದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಮಳೆಯಿಂದಾಗಿ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗದೇ ಚಿಂತೆಯಲ್ಲಿದ್ದ ರೈತರು ಹೊಲ ಗದ್ದೆಗಳಿಗೆ ಇಳಿಯದಿರುವುದು ಕಂಡು ಬಂದಿದೆ.